
ಸಂಜೆವಾಣಿ ವಾರ್ತೆ,
ವಿಜಯಪುರ , ಮೇ. ೧೪: ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿಯಲ್ಲಿ ರೋಜಗಾರ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾವಸಾಬ ಬಿರಾದಾರ ಮಾತನಾಡಿ, “ಈ ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ವಲಸೆಯನ್ನು ತಪ್ಪಿಸಿ ನಿರಂತರವಾಗಿ ಅವರ ಗ್ರಾಮದಲ್ಲಿಯೇ ಉದ್ಯೋಗ ಒದಗಿಸುವುದು ಆ ಮೂಲಕ ಗ್ರಾಮೀಣ ಆಸ್ತಿಗಳ ರಚನೆ ಮಾಡುವುದು, ಜಲ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವುದು, ಅರಣ್ಯೀಕರಣ ಕಾಮಗಾರಿಗಳು, ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡುವ ಉದ್ದೇಶದಿಂದ ಈ ರೋಜಗಾರ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನರೇಗಾ ಕೂಲಿಕಾರರಿಗೆ ತೊಂದರೆಯಾಗದAತೆ ಕೂಲಿಯಾಧಾರಿತ ಸಮುದಾಯ ಕಾಮಗಾರಿಗಳಲ್ಲಿ ಹೆಚ್ಚಿನ ಕೆಲಸ ನೀಡಲಾಗುತ್ತದೆ. ಅದರ ಜೊತೆ-ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ನಿಂಬೆ, ನುಗ್ಗೆ ಇತರೆ ಬೆಳೆಗಳನ್ನು ಬೆಳೆಯಲು ನರೇಗಾದಡಿ ಕೂಲಿ ಮೊತ್ತ ನೀಡುತ್ತಿದೆ. ಇಲ್ಲಿಯೂ ಕೆಲಸ ಮಾಡಿ ಕೂಲಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ವಿಶೇಷಚೇತನರಿಗೆ ಶೇ.೫೦ರಷ್ಟು ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದರು. ಈ ಬಗ್ಗೆ ಕೂಲಿಕಾರರಿಗೆ ಹೆಚ್ಚಿನ ಅರಿವು ಮೂಡಿಸಿ ಯೋಜನೆಯತ್ತ ಕರೆ ತಂದು, ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕೂಲಿಕಾರರನ್ನು ಸಂಘಟಿಸುವ ಕಾರ್ಯ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಮನರೇಗಾ ಯೋಜನೆಯಡಿ ಎಲ್ಲ ನೊಂದಾಯಿತ ಕೂಲಿಕಾರರು ಕೆಲಸ ನಿರ್ವಹಿಸಲು ಮುಂದೆ ಬರಬೇಕು. ಆ ಮೂಲಕ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಬೇಸಿಗೆ ಅವಧಿಯಲ್ಲಿ ಮಾತ್ರವಲ್ಲದೇ ಕೂಲಿ ಕೇಳಿ ಬರುವ ಎಲ್ಲ ಕೂಲಿಕಾರರಿಗೆ ಕೆಲಸ ನೀಡಲು ಗ್ರಾಮ ಪಂಚಾಯತಿ ಸಿದ್ಧವಾಗಿದೆ. ಕೂಲಿ ಕೇಳಿ ಬರುವ ಕೂಲಿಕಾರರಿಗೆ ೧೫ ದಿನಗಳಲ್ಲಿ ಕೆಲಸ ನೀಡುವ ನಿಯಮವಿದೆ. ಆದರೆ ನಾವು ಕೇವಲ ೩-೪ ದಿನದಲ್ಲಿಯೇ ಕೆಲಸ ನೀಡುತ್ತೇವೆ. ಆದಕಾರಣ ನಮ್ಮೂರಿನ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ದುಡಿಯಲು ಬರಬೇಕು ಎಂದರು. ಕಳೆದ ವರ್ಷ ನಮ್ಮ ಗ್ರಾಮ ಪಂಚಾಯತಿಯಿAದ ಅತ್ಯತ್ತಮವಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಜಿಲ್ಲೆಯಲ್ಲಿಯೇ ಮಾದರಿಯಾಗುವಂತಹ ಕಾಮಗಾರಿಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಇದೆಲ್ಲವೂ ತಮ್ಮ ಸಹಕಾರದಿಂದ ಆಗಿದೆ ಎಂದರು.
ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಮತನಾಡಿ ಬೇಸಿಗೆ ಅವಧಿಯಲ್ಲಿ ಎಲ್ಲ ಗ್ರಾಮ ಪಂಚಾಯತಿ ವತಿಯಿಂದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ ಜೊತೆಗೆ ಸ್ವ-ಸಹಾಯ ಸಂಘದ ಸಭೆ, ರೋಜಗಾರ ದಿವಸ್, ವಿಶೇಷ ಗ್ರಾಮ ಸಭಾ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಣ್ಣ-ಅತೀ ಸಣ್ಣ ರೈತ್ತರಿಗೆ ಅವಶ್ಯಕವಿರುವ ವೈಯಕ್ತಿಕ ಕಾಮಗಾರಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರು ತಮ್ಮ ಊರಲ್ಲಿ ಕೆಲಸ ಸಿಗದ ಕಾರಣದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯ. ಇದನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ತಾಲೂಕು ಪಂಚಾಯತಿ ತಂಡ ನರೇಗಾ ಯೋಜನೆಯ ಕುರಿತು, ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಕೂಲಿಕಾರರಿಗೆ ನರೇಗಾದಿಂದಾಗುವ ಅನುಕೂಲಗಳ ಕುರಿತು ಸುವಿವರವಾದ ಮಾಹಿತಿ ನೀಡಿ ಎಲ್ಲರಿಗೂ ಅವರವರ ಗ್ರಾಮದಲ್ಲಿ ನಿರಂತರ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ವಿಶೇಷಚೇತನರಿಗೆ ಈ ಯೋಜನೆಯಲ್ಲಿ ವಿಶೇಷ ವಿನಾಯಿತಿ ಇದ್ದು ಎಲ್ಲ ಗ್ರಾಮದಲ್ಲಿಯೂ ವಿಶೇಷಚೇತನರಿಗೆ ಆದ್ಯತೆ ಮೇಲೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಬಿಜ್ಜರಗಿ ಗ್ರಾಮ ಪಂಚಾಯತಿಯೂ ಕಳೆದ ನಾಲ್ಕೈದು ವರ್ಷಗಳಿಂದ ವಿಶೇಷಚೇತನರಿಗೆ ಕೆಲಸ ನೀಡುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಫ್.ಟಿ ಸಿದ್ರಾಯ ದಾಶ್ಯಾಳ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ರಾಜಶ್ರೀ ಎ, ಸಂತೂರಿ, ಹೆಚ್, ಸ್ವಾತಿ ತಂಬಾಕು, ಅಂಜನಾ ಹಿಪ್ಪರಗಿ, ಕಾಯಕ ಬಂಧು ವಿನಾಯಕ ಕುಂಬಾರ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕೂಲಿಕಾರರು ಹಾಜರಿದ್ದರು.

























