
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ ೧೪:ಬೇಸಿಗೆ ದಿನಗಳಲ್ಲಿ ಜನ-ಜಾನುವಾರುಗಳನ್ನು ನೀರಿನ ತಾಪತ್ರಯದಿಂದ ಪಾರು ಮಾಡಬೇಕು ಎಂಬ ದೂರದೃಷ್ಟಿಯೊಂದಿಗೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಿರ್ಮಾಣಗೊಳ್ಳಲಿರುವ ಜಲ ಸಂಗ್ರಹಗಾರ ನಿರ್ಮಾಣ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಕರ್ನಾಟಕ ನೀರಾವರಿ ನಿಗಮದಿಂದ ೬೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಬೃಹತ್ ಜಲ ಸಂಗ್ರಹಗಾರ ೦.೭೦ ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, ಬಾಬಾನಗರ ಸೇರಿದಂತೆ ಸುತ್ತಲಿನ ಹಳ್ಳಿಗಳ ಜನತೆಗೆ ಬಿರು ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳು ನೀರಿಗಾಗಿ ಪರದಾಡಬಾರದು ಎಂದು ಕನಸು ಕಂಡ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಈ ಜಲಸಂಗ್ರಹಗಾರ ನಿರ್ಮಾಣಕ್ಕೆ ಡಿಪಿಆರ್ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಂಬಣ್ಣ ಹರಳಯ್ಯ ಅವರು, ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ತುಬಚಿ-ಬಬಲೇಶ್ವರ ಬೃಹತ್ ನೀರಾವರಿ ಯೋಜನೆಯಡಿ ಈ ಬೃಹತ್ ಜಲಸಂಗ್ರಹಗಾರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ಅಂಬಣ್ಣ ಹರಳಯ್ಯ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
೫೪೫ ಎಕರೆ ಜಮೀನು ಅಗತ್ಯ:
ಈ ಬೃಹತ್ ಜಲಸಂಗ್ರಹಗಾರ ನಿರ್ಮಾಣಕ್ಕೆ ೫೪೫ ಎಕರೆ ಜಮೀನಿನ ಅವಶ್ಯಕತೆಯಿದೆ. ಹಾಗಾಗಿ ನಿರ್ಮಾಣವಾಗಲಿರುವ ಜಲ ಸಂಗ್ರಹಗಾರದ ಸುತ್ತಲಿರುವ ಸರ್ಕಾರಿ ಜಮೀನನ್ನು ಇದೇ ವೇಳೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಿ ಜಮೀನನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ಹಸ್ತಾಂತರಿಸುವುದಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು,ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಅಗತ್ಯ ಸೂಚನೆ ನೀಡಿದರು.
ತಹಶೀಲ್ದಾರ್ ಕಚೇರಿಗೆ ಭೇಟಿ:
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಕೋಟಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ವೇಳೆ ಬಾಕಿಯಿರುವ ಕಡತಗಳನ್ನು ಪರಿಶೀಲಿಸಿ, ಬೇಗ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಸಮುದಾಯ ಆರೋಗ್ಯಕ್ಕೆ ಕೇಂದ್ರಕ್ಕೆ ಭೇಟಿ:
ನಂತರ ಜಿಲ್ಲಾಧಿಕಾರಿಗಳು ತಿಕೋಟಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಔಷಧಾಲಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ತಹಸೀಲ್ದಾರ್ ಸುರೇಶ ಚಾವಲರ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಂಬಣ್ಣ ಹರಳಯ್ಯ, ಸಣ್ಣ ನೀರಾವರಿ ಇಲಾಖೆಯ ಎಇಇ ವಿಜಯ ವಸ್ತ್ರದ,ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.


























