
ಸಂಜೆವಾಣಿ ವಾರ್ತೆ,
ವಿಜಯಪುರ ಮಾ. ೧೮: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸೇರಿದಂತೆ ಸರಕಾರದ ವಿವಿಧ ಯೋಜನೆಯಡಿ ಅನೇಕ ಫಲಾನುಭವಿಗಳು ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಈವರೆಗೂ ಅರ್ಜಿಗಳನ್ನು ಬ್ಯಾಂಕ್ ಗಳು ಬಾಕಿ ಉಳಿಸಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣಕ್ಕೆ ಫಲಾನುಭವಿಗಳ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವತಿಯಿಂದ ತ್ರೈಮಾಸಿಕ ಡಿಸ್ಟ್ರಿಕ್ಟ್ ಕನ್ಸಲ್ಟೇಟಿವ್ ಕಮಿಟಿ ಸಭೆ ಹಾಗೂ ಡಿಸ್ಟ್ರಿಕ್ಟ್ ಲೆವೆಲ್ ರಿವಿವ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವಾರದಲ್ಲಿ ಬಾಕಿ ಉಳಿದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸಂಪೂರ್ಣವಾಗಿ ವಿಲೇವಾರಿ ಮಾಡತಕ್ಕದ್ದು. ಒಂದು ವೇಳೆ ವಿಳಂಬವಾದಲ್ಲಿ ಸಂಬAಧಿಸಿದ ಬ್ಯಾಂಕ್ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಪಜಾ, ಪಪಂ, ಅಲ್ಪ ಸಂಖ್ಯಾತರ ಹೀಗೆ ಅನೇಕ ದುರ್ಬಲ ವರ್ಗಗಳ ಗ್ರಾಹಕರು ಸೇರದಂತೆ ಸಾಲ ಸೌಲಭ್ಯ ಕೋರಿ, ಬ್ಯಾಂಕ್ ಗಳಿಗೆ ಬಂದಾಗ ಸರಿಯಾಗಿ ಸ್ಪಂದಿಸಬೇಕು. ಅವರೊಂದಿಗೆ ಸಹಾನುಭೂತಿ ಹಾಗೂ ಸಕಾರಾತ್ಮಕ ಮನೋಭಾವದಿಂದ ವರ್ತಿಸಬೇಕು ಎಂದರು.
ಆರ್.ಬಿ.ಐ ಮಾರ್ಗಸೂಚಿ ಪ್ರಕಾರ ಬ್ಯಾಂಕ್ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಸೌಲಭ್ಯಗಳ ಕುರಿತು ಮಾಡಬೇಕು. ಸಾಲ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಸಿಇಒ ಬ್ಯಾಂಕ್ ವ್ಯವಸ್ಥಾಪಕರಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.
ಸಾರ್ವಜನಿಕರು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ದಾಖಲಾತಿಗಳು ಅಪೂರ್ಣ ಇದ್ದಲ್ಲಿ ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಪ್ರತಿಯೊಬ್ಬ ಗ್ರಾಹಕರ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡತಕ್ಕದ್ದು ಎಂದೂ ಹೇಳಿದರು.
ಬ್ಯಾಂಕ್ ಗಳಲ್ಲಿ ಹತ್ತು ಹಲವಾರು ಯೋಜನೆಗಳಿರುತ್ತವೆ. ಎಲ್ಲಾ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ವಿವಿಧ ಇಲಾಖೆಗಳಡಿ ಇರುವ ಯೋಜನೆಗಳಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್.ಆರ್.ಎಲ್.ಎಮ್) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಇರುವ ಉದ್ಯೋಗಿನಿ ಯೋಜನೆ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಇರುವ ಸ್ವಾವಲಂಬಿ ಸಾರಥಿ ಯೋಜನೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಟ್ಯಾಕ್ಸಿ, ಗೂಡ್ಸ್, ಆಟೋ ರಿಕ್ಷಾ ಯೋಜನೆಗಳು, ಡಾ. ಬಿ. ಆರ್. ಅಂಬೇಡ್ಕರ್ ನಿಗಮದ ಯೋಜನೆಗಳು, ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕರ‍್ಯಕ್ರಮ, ಸಮಾಜ ಕಲ್ಯಾಣ ಇಲಾಖೆಯ ಉದ್ಯಮ ಶೀಲತಾ, ಸ್ವಾವಲಂಬಿ ಸಾರಥಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ), ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ ಯೋಜನೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಹೆಸ್ಕಾಂ ಇಲಾಖೆಯ ಪ್ರಧಾನ ಮಂತ್ರಿ ಸರ‍್ಯ ಘರ್: ಮುಫ್ತ್ ಬಿಜ್ಲಿ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಸೇರಿದಂತೆ ಗ್ರಾಹಕರು ಅನೇಕ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹರೆಲ್ಲರ ಅರ್ಜಿಗಳನ್ನು ವಾರದೊಳಗೆ ವಿಲೇವಾರಿ ಮಾಡಬೇಕು ಎಂದರು.
ಅಲ್ಪಸಂಖ್ಯಾತರು, ಮಹಿಳೆಯರು, ಪ.ಜಾ/ಪ.ಪಂ ವರ್ಗಗಳಿಗೆ ನೀಡಲು ಅವಕಾಶವಿರುವ ಎಲ್ಲ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಲು ಪ್ರತಿ ೧೫ ದಿನಗಳಿಗೊಮ್ಮೆ ಪ್ರಗತಿ ಪರಿಶೀಲನಾ ಕೈಗೊಳ್ಳಬೇಕು. ಪ್ರತಿ ೧೫ ದಿನಗಳ ಅಂತರದಲ್ಲಿ ಸಾಧನೆಯಾಗಿರುವ ಪ್ರಗತಿ ಕುರಿತು ವರದಿಯನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು ಎಂದರು.
ಮುAಬರುವ ತ್ರೈಮಾಸಿಕ ಸಭೆಯಲ್ಲಿ ಯಾವುದೇ ಫಲಾನುಭವಿಗಳ ಅರ್ಜಿಗಳು ಬ್ಯಾಂಕ್ ಗಳಲ್ಲಿ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಜಿಪಂ ಸಿಇಒ ರಿಷಿ ಆನಂದ ಅವರು, ೨೦೨೬-೨೭ನೇ ಸಾಲಿನ ಸಂಭಾವ್ಯ ಸಾಲ ಯೋಜನೆಯ ಸಂಭಾವ್ಯ ಲಿಂಕ್ಡ್ ಯೋಜನೆಯ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ವಿಕಾಸ ರಾಠೋಡ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಬಿ. ಸಿದ್ದಯ್ಯ, ಆರ್.ಬಿ.ಐ ವ್ಯವಸ್ಥಾಪಕ ಶೀಲ್ ಪ್ರಿಯಾ ಗೌತಮ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

























