
ಚೆನ್ನೈ, ಮಾ.೧೯: ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂದರ್ ದಿ ರಿವೇಂಜ್ ಚಿತ್ರವು ಬಿಡುಗಡೆಯ ಮೊದಲೇ ಪೇಡ್ ಪ್ರೀಮಿಯರ್ ಪ್ರದರ್ಶನಗಳಿಂದ ಭಾರೀ ದಾಖಲೆ ನಿರ್ಮಿಸಿದೆ. ದೇಶದಾದ್ಯಂತ ನಡೆದ ವಿಶೇಷ ಪ್ರದರ್ಶನಗಳಿಂದಲೇ ಚಿತ್ರವು ೫೨ ಕೋಟಿ ಗ್ರಾಸ್ ವಸೂಲಿ ಮಾಡಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ.
ಟ್ರ್ಯಾಕಿಂಗ್ ವೆಬ್‌ಸೈಟ್ ವರದಿ ಪ್ರಕಾರ, ಚಿತ್ರವು ದೇಶೀಯ ಬಾಕ್ಸ್‌ಆಫೀಸ್‌ನಲ್ಲಿ ೪೪ ಕೋಟಿ ನೆಟ್ ಕಲೆಕ್ಷನ್ ಗಳಿಸಿದೆ. ೧೨,೦೦೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ (ಸುಮಾರು ೧೨,೨೯೨ ಶೋಗಳು) ಬಿಡುಗಡೆಯಾದ ಈ ಚಿತ್ರವು ಪೇಡ್ ಪ್ರೀಮಿಯರ್ ವಸೂಲಿಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿದೆ.
ಇದರಿಂದ ಮೊದಲ ಭಾಗ ಧುರಂದರ್ ಚಿತ್ರದ ಮೊದಲ ದಿನದ ೩೩ ಕೋಟಿ ಗಳಿಕೆಯನ್ನು ಕೂಡ ಮೀರಿಸಿದೆ. ಹೆಚ್ಚಿನ ಟಿಕೆಟ್ ದರ ಇದ್ದರೂ ಪ್ರೇಕ್ಷಕರ ಕುತೂಹಲ ಕಡಿಮೆಯಾಗದೆ, ದೇಶದ ವಿವಿಧ ಭಾಗಗಳಲ್ಲಿ ಥಿಯೇಟರ್‌ಗಳು ಜನಸಂದಣಿಯಿಂದ ಕಿಕ್ಕಿರಿದವು ಎಂದು ತಿಳಿದುಬಂದಿದೆ.
ಆದರೆ ಕೆಲವು ಪ್ರದೇಶಗಳಲ್ಲಿ ಮಾರ್ಚ್ ೧೮ರಂದು ಸಂಜೆ ೫.೩೦ಕ್ಕೆ ನಿಗದಿಯಾಗಿದ್ದ ಶೋಗಳು ತಾಂತ್ರಿಕ ಕಾರಣಗಳಿಂದ ರದ್ದಾಗಿದ್ದು, ಪ್ರೇಕ್ಷಕರಿಗೆ ಹಣ ಮರುಪಾವತಿ ಮಾಡಲಾಗಿದೆ ಎಂದು ವರದಿಯಾಗಿದ್ದು,ಇದರ ನಡುವೆಯೂ ಪ್ರೇಕ್ಷಕರು ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದು, ಪ್ರಾರಂಭಿಕ ಪ್ರತಿಕ್ರಿಯೆಗಳು ಸಹಕಾರಿಯಾಗಿವೆ. ಹೀಗಾಗಿ ‘ಧುರಂಧರ್: ದ ರಿವೆಂಜ್’ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಐತಿಹಾಸಿಕ ಓಟ ನಡೆಸುವ ಸಾಧ್ಯತೆ ಹೆಚ್ಚಾಗಿದೆ.
ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಮಾಧವನ್, ಅರ್ಜುನ್‌ರಾಮ್‌ಪಾಲ್, ಸಂಜಯ್‌ದತ್ತ, ಸಾರಾ ಅರ್ಜುನ್, ರಾಕೇಶ್‌ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೊದಲ ಭಾಗವು ವಿಶ್ವದಾದ್ಯಂತ ೧,೩೦೦ ಕೋಟಿ ವಸೂಲಿ ಮಾಡಿತ್ತು. ಇದೀಗ ಎರಡನೇ ಭಾಗವೂ ಅದನ್ನು ಮೀರಿಸುವ ನಿರೀಕ್ಷೆ ವ್ಯಕ್ತವಾಗಿದೆ.

























