Home ಜಿಲ್ಲೆ ಕಲಬುರಗಿ ಜಾತಿ-ಮತ ಮೀರಿದ ಭಕ್ತಿ: ಸತತ 3ನೇ ವರ್ಷವೂ ರಂಜಾನ್ ಉಪವಾಸ ಆಚರಿಸಿದ ಹಿಂದೂ ಯುವಕ

ಜಾತಿ-ಮತ ಮೀರಿದ ಭಕ್ತಿ: ಸತತ 3ನೇ ವರ್ಷವೂ ರಂಜಾನ್ ಉಪವಾಸ ಆಚರಿಸಿದ ಹಿಂದೂ ಯುವಕ

ಯಡ್ರಾಮಿ:ಮಾ.18: ಮನುಷ್ಯ ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಎಂಬುದನ್ನು ಸಾರುವ ಅಪರೂಪದ ಘಟನೆಯೊಂದು ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ. ಪವಿತ್ರ ರಂಜಾನ್ ಮಾಸದಲ್ಲಿ ಸತತ ಮೂರು ವರ್ಷಗಳಿಂದ ಉಪವಾಸ (ರೋಜಾ) ಆಚರಿಸಿ, ಭಾವೈಕ್ಯತೆಯ ಸಂದೇಶ ಸಾರಿದ ಹಿಂದೂ ಯುವಕ ನಾಗೇಶ ಶಿವನಾಗ ಅಂಕಲಗಾ ಅವರನ್ನು ಪಟ್ಟಣದ ಮದೀನಾ ಮಸೀದಿ ಕಮಿಟಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕಿನ ಅಂಕಲಗಾ ಗ್ರಾಮದ ಮೂಲದವರಾದ ನಾಗೇಶ, ಕಳೆದ 3-4 ವರ್ಷಗಳಿಂದ ಯಡ್ರಾಮಿಯ ಬೇಕ್ರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ರಂಜಾನ್ ಮಾಸ ಪ್ರಾರಂಭವಾದರೆ ಸಾಕು, ಇಸ್ಲಾಂ ಸಂಪ್ರದಾಯದಂತೆ ಅತ್ಯಂತ ಶ್ರದ್ಧೆಯಿಂದ ಪೂರ್ತಿ ಒಂದು ತಿಂಗಳ ಕಾಲ ರೋಜಾ ಆಚರಿಸುತ್ತಾರೆ. ಅಷ್ಟೇ ಅಲ್ಲದೆ, ನಿತ್ಯವೂ ನಮಾಜ್ ನಿರ್ವಹಿಸುವ ಮೂಲಕ ಎಲ್ಲ ಧರ್ಮಗಳೂ ಒಂದೇ ಎಂಬ ಸಮಾನತೆಯ ಸಂದೇಶ ನೀಡುತ್ತಿದ್ದಾರೆ.

ನಾಗೇಶ ಅವರ ಈ ಧಾರ್ಮಿಕ ಸಹಿಷ್ಣುತೆಯನ್ನು ಮೆಚ್ಚಿದ ಮಸೀದಿ ಕಮಿಟಿಯು, ಸೋಮವಾರ 27ನೇ ದಿನದ ‘ಸತಾವಿಸ ತಾಕ್ ರಾತ್’ ಜಾಗರಣೆಯ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು. ಮಸೀದಿ ಕಮಿಟಿಯ ಪದಾಧಿಕಾರಿಗಳು ಹಾಗೂ ಮುಸ್ಲಿಂ ಬಾಂಧವರು ಸೇರಿ ಯುವಕನಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಸೀದಿ ಕಮಿಟಿಯ ಅಧ್ಯಕ್ಷ ಅಮೀರ್ ಪಟೇಲ್ ಚಿಂಚೋಳಿ, ನಮ್ಮ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಹಿಂದಿನಿಂದಲೂ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ನಾಗೇಶ ಅವರು ರಂಜಾನ್ ಉಪವಾಸ ಮಾಡುವ ಮೂಲಕ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಇಂತಹ ಸೌಹಾರ್ದತೆಯ ನಡೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗೇಶ ಅಂಕಲಗಾ, ಎಲ್ಲ ಧರ್ಮಗಳೂ ಶಾಂತಿ ಮತ್ತು ಪ್ರೀತಿಯನ್ನೇ ಬೋಧಿಸುತ್ತವೆ. ಉಪವಾಸ ಮಾಡುವುದರಿಂದ ಮನಸ್ಸಿಗೆ ಅಪಾರ ಶಾಂತಿ ದೊರೆಯುತ್ತದೆ. ನಾನು ಮೂರು ವರ್ಷದಿಂದ ಉಪವಾಸ ( ರೋಜಾ ) ಮಾಡಿಕೊಂಡು ಬಂದಿದೆನೇ ಈ ವರ್ಷವೂ ಮಾಡಿದ್ದೇನೆ ನಿಜ್ಜಕ್ಕೂ ಮಸ್ಸಿಗೆ ತುಂಬಾ ಸಂತೋಷ ಕೊಡುತ್ತದೆ. ನಮ್ಮೂರಿನ ಭಾವೈಕ್ಯತೆಯ ಪರಂಪರೆಯನ್ನು ಮುಂದುವರಿಸುವುದು ನನ್ನ ಉದ್ದೇಶ ಎಂದು ಹೇಳಿದರು.

?ಈ ಸಂದರ್ಭದಲ್ಲಿ ಮದೀನಾ ಮಸೀದಿ ಕಮಿಟಿಯ ಕಾರ್ಯದರ್ಶಿ ಮಾಶಾಕ್ ಸಾಬ ಮುಲ್ಲಾ, ಸದಸ್ಯರಾದ ದಸ್ತಗೀರಸಾಬ ಚೌದರಿ, ವಾಹಿದ್ ಸಾಬ್ ಕುರೆಶಿ ಹಾಗೂ ಸಮುದಾಯದ ನೂರಾರು ಯುವಕರು ಉಪಸ್ಥಿತರಿದ್ದರು.