Home ಜಿಲ್ಲೆ ಬೆಂಗಳೂರು ಸಿಲಿಂಡರ್ ಅಭಾವ: ಇಂಧನ ಸಚಿವರಿಗೆ ಸಿಎಂ ಪತ್ರ

ಸಿಲಿಂಡರ್ ಅಭಾವ: ಇಂಧನ ಸಚಿವರಿಗೆ ಸಿಎಂ ಪತ್ರ

ಬೆಂಗಳೂರು, ಮಾ. ೨೦- ರಾಜ್ಯದಲ್ಲಿ ತಲೆದೋರಿರುವ ವಾಣಿಜ್ಯ ಸಿಲಿಂಡರ್‌ಗಳ ಅಭಾವವನ್ನು ಸರಿಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರದ ಪೆಟ್ರೋಲಿಯಂ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.


ಗೃಹ ಬಳಕೆದಾರರಿಗೆ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡುವ ಪೆಟ್ರೋಲಿಯಂ ಸಚಿವಾಲಯದ ಆದೇಶ ಹಾಗೂ ಮಾರ್ಗ ಸೂಚಿಗಳಂತೆ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಆದರೂ ಹೋಟೆಲ್‌ಗಳು, ರೆಸ್ಟೋರೆಂಟರ್‌ಗಳು, ಪಿಜಿ ಇತ್ಯಾದಿಗಳಿಗೆ ೫೦ ಸಾವಿರ ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆ ಇದೆ. ಆದರೆ ಕೇವಲ ೧ ಸಾವಿರ ಸಿಲಿಂಡರ್‌ಗಳ್ನು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಇದರ ಪರಿಣಾಮ ರಾಜ್ಯದ ಹಲವೆಡೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ. ಹಾಗಾಗಿ ರಾಜ್ಯಕ್ಕೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಐಟಿ ವೃತ್ತಿಪರರು, ವಿದ್ಯಾರ್ಥಿಗಳು, ರೈತರು ಡೈರಿ ಉತ್ಪಾದಕರು ಸೇರಿದಂತೆ ಆತಿಥ್ಯ ಕ್ಷೇತ್ರದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ವಾಣಿಜ್ಯ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಸಮಗ್ರ ವೇದಿಕೆ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿಗಳು, ಆಟೋ ರಿಕ್ಷಾ ಚಾಲಕರುಗಳಿಗೂ ಅನಿಲ ಪೂರೈಕೆಯಾಗುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಒತ್ತಾಯಿಸಿದ್ದಾರೆ.