
ಕಲಬುರಗಿ,ಜ.10-ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಸೇಡಂ ಮತಕ್ಷೇತ್ರದ ಯಡ್ರಾಮಿ ಹಾಗೂ ಸೇಡಂ ಪಟ್ಟಣಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಉದ್ಘಾಟನೆ ಮಾಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿಗಳು ಜನೇವರಿ 12 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲು ಜೇವರ್ಗಿ ಮತಕ್ಷೇತ್ರದ ಯಡ್ರಾಮಿಗೆ ಆಗಮಿಸಲಿದ್ದು, 867.49 ಕೋಟಿ ವೆಚ್ಚದ 83 ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 38.37 ಕೋಟಿ ವೆಚ್ಚದ 17 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಖರ್ಗೆ ಹೇಳಿದರು.
ಮುಂದುವರೆದು, ಸೇಡಂ ಪಟ್ಟಣಕ್ಕೆ ಭೇಟಿ ನೀಡುವ ಸಿಎಂ, 579.68 ಕೋಟಿ ವೆಚ್ಚದ 292 ಯೋಜನೆಗಳಿಗೆ ಅಡಿಗಲ್ಲು ಹಾಗೂ 110.35 ಕೋಟಿ ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಪೂರ್ಣಗೊಂಡ 76 ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಎರಡು ಕಡೆ ಒಟ್ಟು 1595.91 ಕೋಟಿ ವೆಚ್ಚದ 467 ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೇಯ ವರದಿಯಂತೆ ಒಟ್ಟು 3.24 ಲಕ್ಷ ಹೇಕ್ಟರ್ ಹಾನಿ ಪ್ರದೇಶದ ಕುರಿತು ಸರಕಾರಕ್ಕೆ, ಪರಿಹಾರ ಮಂಜೂರು ಮಾಡಲುಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಸದರಿ ಪ್ರಸ್ತಾವನೆಯಂತೆ ಈಗಾಗಲೇ ಪರಿಹಾರ ತಂತ್ರಂಶದಲ್ಲಿ ಅರ್ಹ ರೈತರ ಹಾಗೂ ಹಾನಿ ಪ್ರದೇಶದ ಮಾಹಿತಿಯನ್ನು ಅಳವಡಿಸಲಾಗಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,23,318 ರೈತರು ಪರಿಹಾರ ಪಡೆದ ಫಲಾನುಭವಿಗಳಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ Sಆಖಈ ನಿಯಮಗಳ ಪ್ರಕಾರ ಪಾವತಿಸಲಾದ ಮೊತ್ತ 25,097.21 ಲಕ್ಷಗಳು.
ಕಲಬುರ್ಗಿ ಜಿಲ್ಲೆಗೆ ದೊರಕಿರುವ ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ ಇನ್ ಪುಟ್ ಸಬ್ಸಿಡಿ (ಪ್ರತಿ ಹೆಕ್ಟೇರ್ ಗೆ 8,500 ರಂತೆ) ಪಾವತಿಸಲಾದ ಮೊತ್ತ 24,775.82 ಲಕ್ಷಗಳು. ಕಲಬುರಗಿ ಜಿಲ್ಲೆಗೆ ಈಗಾಗಲೇ ವಿತರಿಸಲಾಗಿರುವ ಪರಿಹಾರ ಒಟ್ಟು ಮೊತ್ತ 49,873.03 ಲಕ್ಷಗಳು ಎಂದು ಸಚಿವರು ವಿವರಿಸಿದರು.
2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 12313 ರೈತರಿಗೆ ಬೇರೆ ಬೇರೆ ಕಾರಣಗಳಿಂದಾಗಿ ಪರಿಹಾರ ಪಾವತಿಸಲು ಆಗಿಲ್ಲ. ಹಾಗಾಗಿ, ಬೆಳೆ ಪರಿಹಾರ ಬರದೇ ಇರುವ ರೈತರು ದೂರು ಸಲ್ಲಿಸುತ್ತಿದ್ದು, ಅದನ್ನು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಖರ್ಗೆ ಹೇಳಿದರು.
2025-26 ನೆ ಸಾಲಿನಲ್ಲಿ ಅತಿವೃಷ್ಟಿಯಿಂದ ಚಿತ್ತಾಪುರ ತಾಲೂಕಿನಲ್ಲಿ ಬೆಳೆ ಹಾನಿ ಅನುಭವಿಸಿದ 1178 ರೈತರ ಮಾಹಿತಿಯನ್ನು ಕೈಬಿಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಂಡಿದ್ದು, ಜೊತೆಗೆ 1178 ಕೈಬಿಟ್ಟ ರೈತರ ಮಾಹಿತಿಯನ್ಮು ಸರ್ಕಾರದ ಅನುಮತಿ ಪಡೆದು ದಿನಾಂಕ 02/01/2026 ರಿಂದ 05/01/2026 ರವರೆಗೆ ಪರಿಹಾರ ತಂತ್ರಾಂಶದಲ್ಲಿ ನಮೂದು ಮಾಡಲಾಗಿದೆ.
ಅದರಂತೆ ಒಟ್ಟು 12,313 ಪರಿಹಾರ ಹಣ ಪಾವತಿಸಲು ವಿವಿಧ ಕಾರಣಗಳಿಂದ ವೈಫಲ್ಯವಾದ ಅರ್ಹ ರೈತರಲ್ಲಿ ಇಲ್ಲಿಯವರೆಗೆ ಒಟ್ಟು 10,542 ಅರ್ಹ ರೈತರುಗಳು ಸಮಸ್ಯೆ ಸರಿಪಡಿಸಿಕೊಂಡಿರುತ್ತಾರೆ. ಇನ್ನು 1,771 ರೈತರ ಪರಿಹಾರ ಹಣ ಪಾವತಿಸಲು ಕೆವೈಸಿ ಪೆಂಡಿಂಗ್, ನಿಷ್ಟ್ರೀಯ ಖಾತೆ, ಖಾತೆ ರದ್ದು, ನಿಖರವಲ್ಲದ ಖಾತೆ, ನಿಷ್ಕ್ರಿಯ ಆಧಾರ್ ಜೋಡಣೆಯಿಂದ ಹೀಗೆ ಅನೇಕ ತಾಂತ್ರಿಕ ಕಾರಣಗಳಿಂದ ವೈಫಲ್ಯವಾದ ರೈತರು ಕೊಡಲೇ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿದ್ದ ಸೇತುವೆಗಳು, ಕಲ್ವರ್ಟ್ ಗಳು ಹಾಗೂ ರಸ್ತೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕ್ರಮವಹಿಸಿದೆ ಎಂದ ಸಚಿವರು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಡಿಯಲ್ಲಿ ಸುಮಾರು 88.80 ವೆಚ್ಚದಲ್ಲಿ 90 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ ಎಂದರು.
ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

























