ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆ ವ್ಯವಹಾರ ಜ್ಞಾನ ಮುಖ್ಯ : ಸುರೇಶ್ ಜತ್ತಿ

ವಿಜಯಪುರ, ಜೂ. ೩೦:ಪ್ರತಿ ವಾರದ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಥವಾ ಅತೀ ಹೆಚ್ಚು ಅಂಕಗಳನ್ನು ತೆಗೆದುಕೊಂಡ ಮಕ್ಕಳಿಗೆ ಐತಿಹಾಸಿಕ ತಾಣವಾಗಿರುವ ವಿಜಯಪುರದ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ವಿನೂತನ ಕಾರ್ಯಕ್ಕೆಸೋಮವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ಹಾಗೂ ನೀಲಾಂಬಿಕ ಪೂರ್ವ ಪ್ರಾಥಮಿಕ ಪ್ರಾಥಮಿಕ ಶಾಲಾ ಸಂಸ್ಥೆಯ ಅಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಪ್ರತಿ ವಾರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ಮಕ್ಕಳನ್ನು ನಗರದ ವಿಖ್ಯಾತ ಗೋಲಗುಂಬಜ್ ಆವರಣಕ್ಕೆ ಮಕ್ಕಳನ್ನು ಕರೆದೊಯ್ದು ಆ ಸ್ಥಳದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತಾ ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಾಮಾನ್ಯ ಜ್ಞಾನ ಹಾಗೂ ವ್ಯವಹಾರ ಜ್ಞಾನ ಅತ್ಯವಶ್ಯಕವಾಗಿದೆ. ಇದೆಲ್ಲದರ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯು ವಿನೂತನ ಕಾರ್ಯಕ್ಕೆ ಕೈ ಹಾಕಿದೆ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ಮಕ್ಕಳಿಗೆ ತರ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ ಉಳಿದ ಮಕ್ಕಳಿಗೂ ಕೂಡ ಕಲಿಕೆಯ ಬಗ್ಗೆ ಆಸಕ್ತಿ ಮೂಡಿ ಅವರು ಕೂಡ ಸ್ಪರ್ಧಾತ್ಮಕ ಯುಗದಲ್ಲಿ ಪ್ರಾಮಾಣಿಕತೆಯಿಂದ ಅಭ್ಯಾಸದತ್ತ ಒಲವು ತೋರಿಸುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಮುಖ್ಯ ಶಿಕ್ಷಕಿ ರಾಜೇಶ್ವರಿ ಮುಳುಜಿ, ಸೌಮ್ಯ ಗಲಗಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.