ಬಸ್ ನಿಲ್ದಾಣ ಪರಿಶೀಲನೆ


ಗದಗ,ಜೂ.೧೩: ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಅವರ ನೇತೃತ್ವದಲ್ಲಿ ಸಮಿತಿ ಸದಸ್ಯರು ಗುರುವಾರ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.


ಮೊದಲು ಬಸ್ ನಿಲ್ದಾಣದ ಆವರಣವನ್ನು ಪರಿಶೀಲನೆ ನಡೆಸಿದ ಅವರು ನಿಲ್ದಾಣದ ಸ್ವಚ್ಛತೆಗೆ ಗಮನ ಹರಿಸಬೇಕು. ಇದೇ ಜೂನ್ ೨೦ಕ್ಕೆ ಪುನ: ಬಸ್‌ನಿಲ್ದಾಣಕ್ಕೆ ಸ್ವಚ್ಛತೆಯ ಪರಿಶೀಲನೆಗಾಗಿ ಆಗಮಿಸುವೆ. ಆ ಸಂದರ್ಭದಲ್ಲಿ ನಿಲ್ದಾಣ ಆವರಣ ಶುಚಿಯಾಗಿರಬೇಕು. ನಿಲ್ದಾಣದಲ್ಲಿನ ಸಾರ್ವಜನಿಕರಿಗೆ ಕೂರಲು ಉತ್ತಮ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ನಿಲ್ದಾಣ ಆಗಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಬಿ.ಬಿ.ಅಸೂಟಿ ನಿರ್ದೇಶನ ನೀಡಿದರು.


ಶೌಚಾಲಯ ವೀಕ್ಷಣೆ : ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಪರಿಶೀಲನೆ ನಡೆಸಿ ಅಲ್ಲಿಯೂ ಸಹ ಸ್ವಚ್ಛತೆ ಅಗತ್ಯವಾಗಿದೆ. ಅಲ್ಲದೇ ಸಾರ್ವಜನಿಕರಿಂದ ನಿಗದಿತ ಶುಲ್ಕ ಪಡೆದು ಸಾರ್ವಜನಿಕರಿಗೆ ಶೌಚಾಲಯ ಬಳಕೆಗೆ ದೊರೆಯಬೇಕು. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು ಪುನ: ದೂರುಗಳು ಬರದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿಗಾ ವಹಿಸಲು ಸೂಚಿಸಿದರು.
ವಿಶ್ರಾಂತಿ ಕೊಠಡಿ : ನಿಲ್ದಾಣದ ಆವರಣದಲ್ಲಿರುವ ಶಿಶು ಆರೈಕೆ ವಿಶ್ರಾಂತಿ ಕೊಠಡಿಗೆ ಭೇಟಿ ನೀಡಿದ ಅವರು ವಿಶ್ರಾಂತಿ ಕೊಠಡಿಯಲ್ಲಿ ಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಪ್ರತಿನಿತ್ಯ ವಿಶ್ರಾಂತಿ ಕೊಠಡಿಗೆ ಸಾರ್ವಜನಿಕರು ಆಗಮಿಸುವಂತೆ ಶುಚಿಯಾಗಿಟ್ಟುಕೊಳ್ಳಲು ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಬಿ.ಬಿ.ಅಸೂಟಿ ನಿರ್ದೇಶನ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿಯಿಂದ ಜೂನ್ ೨೦ ಕ್ಕೆ ಪುನ: ಪರಿಶೀಲನೆಗೆ ಆಗಮಿಸಲಾಗುವುದು. ಆ ಸಂದರ್ಭದಲ್ಲಿ ಇಂದು ನೀಡಿದ ಎಲ್ಲ ಸೂಚನೆಗಳು ಕಾರ್ಯರೂಪಕ್ಕೆ ಬಂದಿರಬೇಕು. ಇಲ್ಲವಾದಲ್ಲಿ ಸಂಬAಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.


ಗ್ಯಾರಂಟಿ ಸಂವಾದ : ನಿಲ್ದಾಣದ ಆವರಣದಲ್ಲಿನ ಮಹಿಳೆಯರೊಂದಿಗೆ ಹಾಗೂ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಸಮಿತಿ ಸದಸ್ಯರು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಹಾಗೂ ಯಶಸ್ಸಿನ ಬಗ್ಗೆ ಅಭಿಪ್ರಾಯಗಳನ್ನು ಆಲಿಸಿದರು. ಶಕ್ತಿ ಯೋಜನೆ ಮಹಿಳೆಯರ ಸಬಲತೆಗೆ ಶಕ್ತಿಯಾಗಿ ನಿಂತಿರುವುದು ಅಕ್ಷರಶ: ಸತ್ಯ. ಅದರಂತೆ ಸುಸ್ಥಿತ ಬದುಕಿಗಾಗಿ ಗೃಹಲಕ್ಷಿö್ಮÃ ಯೋಜನೆ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ ಹಾಗೂ ಬಡವರ ಆಶಾಕಿರಣ ಗೃಹ ಜ್ಯೋತಿ, ನಿರುದ್ಯೋಗ ನಿವಾರಣೆಗೆ ಯುವನಿಧಿ ಸಹಕಾರಿಯಾಗಿವೆ ಎಂದು ಫಲಾನುಭವಿಗಳು ತಮ್ಮ ಮನದಾಳದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವರಾದ ಎಚ್.ಕೆ.ಪಾಟೀಲ ಸೇರಿದಂತೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.


ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಸದಸ್ಯರಾದ ಈಶ್ವರ ಹುಣಸಿಕಟ್ಟಿ, ಅಶೋಕ ಮಂದಾಲಿ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ನಿಂಗಪ್ಪ ದೇಸಾಯಿ, ಮುಲ್ಲಾ ಬಾರಕೇರ, ಸಂಗಮೇಶ ಹಾದಿಮನಿ, ಶಂಭು ಕಾಳೆ, ಗಣೇಶ ಮಿಟಾಯಿ, ಗಣ್ಯರಾದ ಚನ್ನಬಸಪ್ಪ ಅಕ್ಕಿ, ಅನಿಲ ಗರಗ, ಮೋಹನ ದೊಡ್ಡಬಂಡಿ, ಸಮೀರ ಉಪಸ್ಥಿತರಿದ್ದರು.