Home ಮುಖಪುಟ ಸುದ್ದಿ ಭಾರತದತ್ತ ೧೫ ಪ್ರವಾಸಿಗರ ಮೃತದೇಹ

ಭಾರತದತ್ತ ೧೫ ಪ್ರವಾಸಿಗರ ಮೃತದೇಹ

ವಿಯೆಟ್ನಾಂ ದುರಂತ

ಹೊಸದಿಲ್ಲಿ/ಹೋಚಿಮಿನ್ ಸಿಟಿ.ಜು.೧೩- ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಸಮೀಪ ಶನಿವಾರ ಸಂಭವಿಸಿದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಮೃತಪಟ್ಟ ೧೫ ಮಂದಿ ಭಾರತೀಯ ಪ್ರವಾಸಿಗರ ಪಾರ್ಥಿವ ಶರೀರಗಳನ್ನು ಇಂದು ಭಾರತಕ್ಕೆ ತರಲಾಗುವುದು ಎಂದು ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಹೋಚಿಮಿನ್ ಸಿಟಿಯಿಂದ ಹೊರಡಲಿರುವ ವಿಯೆಟ್ನಾಂ ಏರ್‌ಲೈನ್ಸ್‌ನ ವಿಎನ್ ೯೭೯ ವಿಶೇಷ ವಿಮಾನದ ಮೂಲಕ ಮೃತದೇಹಗಳನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ಥಳೀಯ ಕಾಲಮಾನ ಸಂಜೆ ೬ ಗಂಟೆಗೆ ಹೊರಡಲಿರುವ ವಿಮಾನವು ಭಾರತೀಯ ಕಾಲಮಾನ ರಾತ್ರಿ ೯:೩೫ಕ್ಕೆ ಮುಂಬೈ ತಲುಪಲಿದೆ.

ಮೃತರ ಪಾರ್ಥಿವ ಶರೀರಗಳನ್ನು ಆಯಾ ರಾಜ್ಯಗಳಿಗೆ ತಲುಪಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯ ಸಮನ್ವಯತೆ ಸಾಧಿಸುವಂತೆ ಕೋರಲಾಗಿದೆ. ಮೃತಪಟ್ಟ ೧೫ ಪ್ರವಾಸಿಗರಲ್ಲಿ ೧೦ ಮಂದಿ ತಮಿಳುನಾಡು, ಮೂವರು ಆಂಧ್ರಪ್ರದೇಶ ಹಾಗೂ ಇಬ್ಬರು ಕೇರಳ ಮೂಲದವರಾಗಿದ್ದಾರೆ ಎಂದು ರಾಯಭಾರ ಕಚೇರಿ ದೃಢಪಡಿಸಿದೆ.

ಶನಿವಾರದಂದು ಒಟ್ಟು ೩೨ ಭಾರತೀಯ ಪ್ರವಾಸಿಗರು ಮತ್ತು ನಾಲ್ಕು ಮಂದಿ ಸ್ಥಳೀಯ ಸಿಬ್ಬಂದಿ ಇದ್ದ ಸ್ಪೀಡ್‌ಬೋಟ್ ಫೂ ಕ್ವೋಕ್ ದ್ವೀಪದ ಮೇ ರುತ್ ನ್ಗೋಯ್ ಎಂಬಲ್ಲಿಂದ ಅನ್ ಥೋಯ್ ಬಂದರಿಗೆ ಮರಳುತ್ತಿದ್ದಾಗ ತೀರದಿಂದ ಕೇವಲ ೪೦೦ ಮೀಟರ್ ದೂರದಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಈ ಭೀಕರ ಅವಘಡದಲ್ಲಿ ೧೫ ಪ್ರವಾಸಿಗರು ಜಲಸಮಾಧಿಯಾಗಿದ್ದರು.

ರಕ್ಷಣಾ ಕಾರ್ಯಾಚರಣೆಯ ವೇಳೆ ಬದುಕುಳಿದ ೧೭ ಪ್ರವಾಸಿಗರಲ್ಲಿ ೧೬ ಜನರನ್ನು ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಈಗಾಗಲೇ ಭಾರತಕ್ಕೆ ಮರಳುತ್ತಿದ್ದಾರೆ. ಆದರೆ, ಮತ್ತೊಬ್ಬ ಪ್ರವಾಸಿಗನ ಸ್ಥಿತಿ ಗಂಭೀರವಾಗಿದ್ದು, ಸದ್ಯ ಫೂ ಕ್ವೋಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಯೆಟ್ನಾಂ ಪೊಲೀಸರು ಈಗಾಗಲೇ ಬೋಟ್ ಕ್ಯಾಪ್ಟನ್‌ನನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.