
ಬೀದರ್: ಕನ್ನಡ ರಾಜ್ಯೋತ್ಸವದಂದು ಕಪ್ಪು ದಿನಾಚರಣೆ ಆಚರಿಸಿ, ಭಾಲ್ಕಿ ಮತ್ತು ಬೀದರ್ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಿರುವ ಭಾಲ್ಕಿಯ ಯುವಕ ದಿನೇಶ ಮುದಾಳೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ನವೆಂಬರ್ 1ರಂದು ರಾಜ್ಯಾದ್ಯಂತ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಸಂದರ್ಭದಲ್ಲಿ, ಭಾಲ್ಕಿ ಪಟ್ಟಣದ ನಿವಾಸಿ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯನೆಂದು ಹೇಳಲಾದ ದಿನೇಶ ಮುದಾಳೆ ಎಂಬ ಯುವಕ ಕಪ್ಪು ದಿನಾಚರಣೆ ಆಚರಿಸಿ, ಭಾಲ್ಕಿ ಮತ್ತು ಬೀದರ್ಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂದು ಒತ್ತಾಯಿಸಿರುವುದು ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಕರವೇ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವದಂತಹ ನಾಡಿನ ಹೆಮ್ಮೆಯ ದಿನದಂದು ಇಂತಹ ಚಟುವಟಿಕೆಗಳು ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪಾ, ಜಿಲ್ಲಾ ಕಾರ್ಯದರ್ಶಿ ಮೊಜೆಸ್ ಅಣದೂರ, ಜಿಲ್ಲಾ ಸಹ ಕಾರ್ಯದರ್ಶಿ ಅಶೋಕ್ ಕಡ್ಯಾಳ್, ಜಿಲ್ಲಾ ಮುಖಂಡ ಸಾಗರ್ ಕಡ್ಯಾಳ, ಬೀದರ್ ದಕ್ಷಿಣ ಕ್ಷೇತ್ರದ ತಾಲೂಕು ಅಧ್ಯಕ್ಷ ನಿಲೇಶ ರಾಠೋಡ್, ತಾಲೂಕು ಕಾರ್ಯದರ್ಶಿ ಶಿವಕುಮಾರ್ ಮಾಮೂಡಗಿ, ತಾಲೂಕು ಸಹ ಕಾರ್ಯದರ್ಶಿ ರಾಜಗೊಂಡ ಅಣದೂರ, ರಾಹುಲ್ ಜಾದವ್, ಅರವಿಂದ್, ಅಜಯ್ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.





















