Home ಜಿಲ್ಲೆ ಬೇಸಿಗೆಯಲ್ಲಿ ಜನತೆಗೆ ನೆರವಾಗಲು ಮುಂದಾದ ಬಸವಶ್ರೀ ಬ್ಯಾಂಕ್: ಉಚಿತ ಕುಡಿಯುವ ನೀರಿನ ಕೇಂದ್ರ ಆರಂಭ

ಬೇಸಿಗೆಯಲ್ಲಿ ಜನತೆಗೆ ನೆರವಾಗಲು ಮುಂದಾದ ಬಸವಶ್ರೀ ಬ್ಯಾಂಕ್: ಉಚಿತ ಕುಡಿಯುವ ನೀರಿನ ಕೇಂದ್ರ ಆರಂಭ

ಯಾದಗಿರಿ:ಮಾ.೧೮: ಉರಿ ಬಿಸಿಲಿನ ನಡುವೆ ಸಾರ್ವಜನಿಕರ ದಾಹ ನೀಗಿಸುವ ನಿಟ್ಟಿನಲ್ಲಿ ಶ್ರೀ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ, ಮಾನವಿ ಯಾದಗಿರಿ ಶಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಪಟ್ಟಣದಲ್ಲಿ ಉಚಿತ ಶುದ್ಧ ಕುಡಿಯುವ ನೀರಿನ ಕೇಂದ್ರವನ್ನು ಆರಂಭಿಸಿದೆ.

ಚಿತ್ತಾಪುರ ರಸ್ತೆಯ ಆರ್‌ಟಿಓ ಕಚೇರಿ ಎದುರು ಮಂಗಳವಾರ ಆರಂಭವಾದ ಈ ಅರವಟ್ಟಿಗೆ ಸ್ಥಳೀಯರಿಗೆ ಹಾಗೂ ಹೊರಗಿನಿಂದ ಬರುವ ಪ್ರಯಾಣಿಕರಿಗೆ ತಂಪಿನ ಆಸರೆ ನೀಡುತ್ತಿದೆ. ಉದ್ಘಾಟನೆ ಬಳಿಕ ಮಾತನಾಡಿದ ಸಂಘದ ಸಿಇಒ ವೀರೇಶ ಎನ್. ಹೊಸೂರು, ಬೇಸಿಗೆ ತಾಪಮಾನ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಜನಸೇವೆ ಮುಖ್ಯ ಉದ್ದೇಶವಾಗಿದ್ದು, ಪ್ರತೀ ವರ್ಷವೂ ಈ ರೀತಿಯ ಸೇವಾ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘವು ಕೇವಲ ಯಾದಗಿರಿಯಲ್ಲಿ ಮಾತ್ರವಲ್ಲದೆ ಮಾನವಿ, ಲಿಂಗಸುಗೂರು, ಸಿರವಾರ, ದೇವದುರ್ಗ, ರಾಯಚೂರು, ಸಿಂಧನೂರು, ಗಂಗಾವತಿ, ಕೊಪ್ಪಳ ಹಾಗೂ ಹುಣಸಗಿ ಸೇರಿದಂತೆ ವಿವಿಧ ಶಾಖೆಗಳಲ್ಲೂ ನೀರಿನ ಅರವಟ್ಟಿಗೆಗಳನ್ನು ಆರಂಭಿಸಿದ್ದು, ಸಾವಿರಾರು ಜನರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಹಾಗೂ ಪ್ರಯಾಣಿಕರು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಂಘವು ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ ಎಂಬುದು ಗಮನಾರ್ಹವಾಗಿದೆ.

ಕಾರ್ಯಕ್ರಮದಲ್ಲಿ ಯಾದಗಿರಿ ಶಾಖೆಯ ಸದಸ್ಯರಾದ ಬಸವರಾಜಪ್ಪ ಗೌಡ ಬಿಳ್ಹಾರ್, ಶರಣಬಸಪ್ಪ ಗೌಡ, ಸುರೇಶ್ ಗೌಡ ಶೆಟ್ಟಳ್ಳಿ, ಸಂಜೀವ ರೆಡ್ಡಿ, ವೈಜನಾಥ, ಪರಸನಗೌಡ, ಶರಣಬಸಪ್ಪ ಬೆಂಕೋಫ್, ರಮೇಶ ಬಸವಂತಪುರ, ಈರಪ್ಪ ಸೇರಿದಂತೆ ವ್ಯವಸ್ಥಾಪಕ ಅಭಿಷೇಕ ಬಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.