Home ಮುಖಪುಟ ಸುದ್ದಿ ಸೌದಿ-ಖತರ್ ತೈಲ, ಅನಿಲ ಘಟಕಗಳ ಮೇಲೆ ದಾಳಿ ; ಭಾರತಕ್ಕೆ ಗಂಭೀರ ಪರಿಣಾಮ ಸಾಧ್ಯತೆ

ಸೌದಿ-ಖತರ್ ತೈಲ, ಅನಿಲ ಘಟಕಗಳ ಮೇಲೆ ದಾಳಿ ; ಭಾರತಕ್ಕೆ ಗಂಭೀರ ಪರಿಣಾಮ ಸಾಧ್ಯತೆ

ನವದೆಹಲಿ.ಮಾ ೧೯: ಇರಾನ್‌ಅಮೆರಿಕಾಇಸ್ರೇಲ್ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲಿನ ದಾಳಿಗಳ ಮೂಲಕ ಮತ್ತಷ್ಟು ಭೀಕರ ಹಂತಕ್ಕೇರಿದೆ. ಮಧ್ಯಪ್ರಾಚ್ಯದ ಪ್ರಮುಖ ಇಂಧನ ಕೇಂದ್ರಗಳ ಮೇಲೆ ನಡೆದ ಪರಸ್ಪರ ದಾಳಿಗಳು ಜಾಗತಿಕ ಆರ್ಥಿಕತೆಗೆ, ವಿಶೇಷವಾಗಿ ಭಾರತಕ್ಕೆ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.


ಇಸ್ರೇಲ್ ಇತ್ತೀಚೆಗೆ ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್ ಗ್ಯಾಸ್ಫೀಲ್ಡ್ ಮೇಲೆ ದಾಳಿ ನಡೆಸಿದ ನಂತರ, ಇರಾನ್ ಪ್ರತಿದಾಳಿ ನಡೆಸಿ ಸೌದಿ ಅರೇಬಿಯಾ, ಖತರ್ ಮತ್ತು ಯುಎಇ ದೇಶಗಳ ತೈಲ ಹಾಗೂ ಅನಿಲ ಘಟಕಗಳನ್ನು ಗುರಿಯಾಗಿಸಿಕೊಂಡಿದೆ. ಸೌದಿ ಅರೇಬಿಯಾದ ಅರಾಮ್ಕೊ ಕಂಪನಿಯ ಸ್ಯಾಮ್ರೆಫ್ ರಿಫೈನರಿ ಹಾಗೂ ಖತರ್‌ನ ರಾಸ್ ಲಾಫ್ಫಾನ್ ಎಲ್‌ಎನ್‌ಜಿ ಘಟಕಗಳ ಮೇಲೆ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.


ಸೌತ್ ಪಾರ್ಸ್ ಅನಿಲ ಕ್ಷೇತ್ರವು ಜಾಗತಿಕ ದ್ರವೀಕೃತ ನೈಸರ್ಗಿಕ ಅನಿಲ ಸರಬರಾಜಿನ ಹೃದಯವಾಗಿದೆ. ಇದರಲ್ಲಿ ಅಂದಾಜು ೧,೮೦೦ ಟ್ರಿಲಿಯನ್ ಕ್ಯೂಬಿಕ್ ಫೀಟ್ ಅನಿಲ ಸಂಗ್ರಹವಿದ್ದು, ಜಗತ್ತಿನ ಬೇಡಿಕೆಯನ್ನು ೧೨-೧೩ ವರ್ಷಗಳವರೆಗೆ ಪೂರೈಸುವ ಸಾಮರ್ಥ್ಯ ಹೊಂದಿದೆ. ಈ ಕ್ಷೇತ್ರವನ್ನು ಇರಾನ್ ಮತ್ತು ಖತರ್ ಹಂಚಿಕೊಂಡಿದ್ದು, ಖತರ್ ಭಾಗವನ್ನು ‘ನಾರ್ತ್ ಫೀಲ್ಡ್’ ಎಂದು ಕರೆಯಲಾಗುತ್ತದೆ.


ಈ ದಾಳಿಗಳ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ೧೧೦ ಡಾಲರ್‌ಗೆ ಏರಿಕೆಯಾಗಿದೆ. ಜಾಗತಿಕ ಅನಿಲ ದರದಲ್ಲಿಯೂ ಶೇಕಡಾ ೬ರಷ್ಟು ಏರಿಕೆ ಕಂಡುಬಂದಿದೆ. ಇಂಧನ ಮೂಲಸೌಕರ್ಯ ಹಾನಿಯಾಗಿದ್ದರೆ ಅದನ್ನು ಮರುಸ್ಥಾಪಿಸಲು ವರ್ಷಗಳ ಕಾಲ ಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.


ಭಾರತದ ದೃಷ್ಟಿಯಿಂದ ಈ ಬೆಳವಣಿಗೆ ಹೆಚ್ಚು ಆತಂಕಕಾರಿ. ಭಾರತವು ತನ್ನ ಎಲ್‌ಎನ್‌ಜಿ ಅಗತ್ಯಗಳಲ್ಲಿ ಬಹುಪಾಲು ಖತರ್ ಮತ್ತು ಸೌದಿ ಅರೇಬಿಯಾದ ಮೇಲೆ ಅವಲಂಬಿತವಾಗಿದೆ. ದೇಶಕ್ಕೆ ಅಗತ್ಯವಿರುವ ಎಲ್‌ಪಿಜಿ ಸರಬರಾಜಿನ ಸುಮಾರು ೮೦-೮೫% ಈ ದೇಶಗಳಿಂದಲೇ ಬರುತ್ತದೆ. ಈ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಗ್ಯಾಸ್ ದರ ಏರಿಕೆ, ರಸಗೊಬ್ಬರ ಉತ್ಪಾದನೆ ಕುಂಠಿತ ಹಾಗೂ ಸಿಎನ್‌ಜಿ, ಪಿಎನ್‌ಜಿ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.


ಇದಲ್ಲದೆ ಹೋರ್ಮುಜ್ ಸಮುದ್ರಸಂಕುಲದ ಮೂಲಕ ಸಾಗುವ ನೌಕೆಗಳ ಸಂಚಾರಕ್ಕೂ ಅಡ್ಡಿಪಡಿಸಿರುವುದರಿಂದ ಜಾಗತಿಕ ಸರಬರಾಜು ಸರಪಳಿಯಲ್ಲಿ ಗಂಭೀರ ವ್ಯತ್ಯಯ ಉಂಟಾಗಿದೆ. ಯುದ್ಧ ಮುಂದುವರಿದರೆ ಜಾಗತಿಕ ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭೀತಿ ವ್ಯಕ್ತವಾಗಿದೆ.ಒಟ್ಟಾರೆ, ಇಂಧನವೇ ಯುದ್ಧದ ಆಯುಧವಾಗಿ ಪರಿಣಮಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ತೈಲ ಮತ್ತು ಅನಿಲ ಬೆಲೆ ಏರಿಕೆ ಹಾಗೂ ಸರಬರಾಜು ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇದೆ.