
ಬೀದರ:ಮಾ.೧೮:ಪರಿಶಿಷ್ಟ ಜಾತಿಯ ಬಲಗೈ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವಂತೆ ಆಗ್ರಹಿಸಿ, ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ, ಬೀದರ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ೦೪-೦೮-೨೦೨೫ರಂದು ಸಲ್ಲಿಸಿರುವ ವರದಿ ಅವೈಜ್ಞಾನಿಕ ಹಾಗೂ ದೋಷಪೂರಿತವಾಗಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಸಲ್ಲಿಸಲಾಗಿದೆ ಎಂದು ಸಮಿತಿ ಆರೋಪಿಸಿದೆ. ಈ ವರದಿಯ ಆಧಾರದ ಮೇಲೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಬಲಗೈ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದೆ.
ಜೇಷ್ಠತಾ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ, ವಿವಿಧ ಇಲಾಖೆಗಳು ಬಡ್ತಿ ಮೀಸಲಾತಿಯಲ್ಲಿ ವಂಚನೆ ಮಾಡುತ್ತಿರುವುದನ್ನು ಸಮಿತಿ ಖಂಡಿಸಿದೆ. ಒಳಮೀಸಲಾತಿ ಹಾಗೂ ರೋಸ್ಟರ್ ಬಿಂದುಗಳ ನಿಗದಿಯಲ್ಲಿ ಅನೇಕ ಗೊಂದಲಗಳಿದ್ದು, ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಒತ್ತಾಯಿಸಿದೆ.
ಸರ್ಕಾರದ ವಿವಿಧ ಆದೇಶಗಳಲ್ಲಿ ಮೀಸಲಾತಿ ರೋಸ್ಟರ್ ಬಿಂದುಗಳನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದನ್ನು ಪರಿಷ್ಕರಿಸುವುದು, ಹಳೆಯ ನಿಯಮಾವಳಿಗಳನ್ನು ಅನುಸರಿಸಿ ಹೊಸ ರೋಸ್ಟರ್ ವ್ಯವಸ್ಥೆ ಜಾರಿಗೆ ತರುವುದು, ಜೇಷ್ಠತಾ ಸಂರಕ್ಷಣಾ ಕಾಯ್ದೆ ಜಾರಿಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಬ್ಯಾಕ್‌ಲಾಗ್ ಹುದ್ದೆಗಳನ್ನು ಒಂದೇ ಬಾರಿ ಮುಂಬಡ್ತಿ ಮೂಲಕ ಭರ್ತಿ ಮಾಡುವುದು, ತಪ್ಪು ಸ್ಪಷ್ಟೀಕರಣ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಹಾಗೂ ವಿವಿಧ ಇಲಾಖೆಗಳು ನೀಡಿರುವ ಗೊಂದಲಮಯ ಅಭಿಪ್ರಾಯಗಳನ್ನು ಹಿಂಪಡೆಯುವAತೆ ಸಮಿತಿ ಆಗ್ರಹಿಸಿದೆ.
ಒಳಮೀಸಲಾತಿ ಗೊಂದಲಗಳು ಪರಿಹಾರವಾಗುವ ತನಕ ಪ್ರಸ್ತುತ ಮೀಸಲಾತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಲು ಮನವಿಯಲ್ಲಿ ಸೂಚಿಸಲಾಗಿದೆ.
ಹಕ್ಕೊತ್ತಾಯಗಳು:
ಸಮಿತಿ ತಮ್ಮ ಮನವಿಯಲ್ಲಿ ಕೆಲವು ಪ್ರಮುಖ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದು, ಅವುಗಳಲ್ಲಿ ಮುಖ್ಯವಾಗಿ-
ಒಳಮೀಸಲಾತಿ ವರದಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ತನಕ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಜಾರಿಯಲ್ಲಿರುವ ಒಳಮೀಸಲಾತಿ ಕ್ರಮಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು.
ಹೊಸ ಜಾತಿ ಪ್ರಮಾಣ ಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ, ಹಳೆಯ ಪ್ರಮಾಣ ಪತ್ರವನ್ನೇ ಮುಂದುವರಿಸಬೇಕು.
ಒಳಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ ಸರಿಪಡಿಸಬೇಕು.
ಗೊಂದಲಗಳು ನಿವಾರಣೆಯಾಗುವವರೆಗೆ ಹಳೆಯ ಮೀಸಲಾತಿಯನ್ನೇ ಅನುಸರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಮಾರ್ಚ್ ೨೭ ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತು ತೆಗೆದುಕೊಳ್ಳುವ ತೀರ್ಮಾನದಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.
ಈ ಸಂದರ್ಭದಲ್ಲಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಮಹೇಶ ಗೋರನಾಳಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಕಾಶ ರಾವಣ, ಪ್ರದೀಪ ನಾಟೇಕರ್, ಪವನ ಮಿಠಾರೆ, ರಾಹುಲ್ ಡಾಂಗೆ, ಭೀಮರಾವ ಮಾಲಗತ್ತಿ, ಸೂರ್ಯಕಾಂತ ಸಾದುರೆ, ವಿನೋದ ಬಂದಗೆ, ಸಂಜುಕುಮಾರ ಸಾಗರ ಹಾಗೂ ಅರುಣ ಪಟೇಲ್ ಉಪಸ್ಥಿತರಿದ್ದರು.
ಇದೇ ವೇಳೆ ಸಮಿತಿಯ ಸಲಹೆಗಾರರಾದ ಮಾರುತಿ ಬೌದ್ಧೆ, ಬಾಬುರಾವ ಪಾಸ್ವಾನ್, ಅನೀಲಕುಮಾರ ಬೆಲ್ದಾರ್, ಶ್ರೀಪತರಾವ ದೀನೆ, ಕಲ್ಯಾಣರಾವ ಭೋಸ್ಲೆ, ರಾಜಕುಮಾರ ಮೂಲಭಾರತಿ, ಶಿವಕುಮಾರ ನೀಲಿಕಟ್ಟಿ, ವಿಠಲದಾಸ ಪ್ಯಾಗೆ, ಕಪಿಲ ಗೊಡಬೊಲೆ, ವಿನೋದ ಅಪ್ಪೆ, ಬಾಬುರಾವ ಟೈಗರ್ (ಹುಮನಾಬಾದ), ವಿನಯಕುಮಾರ ಮಾಳಗೆ, ರಾಜಕುಮಾರ ಸಿಂಧೆ (ಬೀದರ ದಕ್ಷಿಣ), ಪ್ರವೀಣ ಕರಂಜಿ (ಔರಾದ), ರಾಜಕುಮಾರ ಮೋರೆ (ಭಾಲ್ಕಿ) ಹಾಗೂ ಪ್ರಕಾಶ ಸುಲ್ತಾನೆ (ಬಸವಕಲ್ಯಾಣ) ಭಾಗವಹಿಸಿದ್ದರು.
ಪ್ರಮುಖರಾದ ಪ್ರಮೋದ ಶಿಂದೆ, ಉದಯ ನಾಯಕ, ಸಂದೀಪ್ ಕಾಂಟೆ, ಮುಖೇಶ ರಾಯ್, ಲಕ್ಷ್ಮಣ ಕಾಂಬಳೆ, ಸಂಜುಕುಮಾರ ಮೇತ್ರೆ, ಸುನೀಲ ಸಂಗಮ್, ಗಂಜೇAದ್ರ ಕನಕಟಕರ್, ಮಲ್ಲಿಕಾರ್ಜುನ ಮಹೇಂದ್ರಕುಮಾರ, ಸಂಜುಕುಮಾರ ಭಾವಿಕಟ್ಟಿ, ಮಲ್ಲಿಕಾರ್ಜುನ ಮಾಲೆ, ಮಲ್ಲಿಕಾರ್ಜುನ ಮೊಳಕೆರೆ, ಪ್ರೇಮ ಬುಡಕೆ, ಗಂಗಮ್ಮಾ ಫುಲೆ, ಸುಧಾಮಣಿ ಗುಪ್ತಾ, ರಂಜೀತಾ ಜೈನೋರ್ ಹಾಗೂ ಉಷಾಬಾಯಿ ಬನ್ಸೂಡೆ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

























