
ಯಾದಗಿರಿ,ಮಾ.20-ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಂಸ್ಕøತಿಕ ಅವನತಿ ಎದ್ದು ಕಾಣುತ್ತಿದ್ದು, ಅದರಲ್ಲೂ ವಿಶೇಷವಾಗಿ ‘ಕೆ.ಡಿ.’ (ಕೆಡಿ: ದಿ ಡೆವಿಲ್ ) ಚಿತ್ರದ ಅಶ್ಲೀಲ ಸಾಹಿತ್ಯದ ಹಾಗೂ ‘ಟಾಕ್ಸಿಕ್’ ಚಿತ್ರದ ಟೀಸರ್‍ನಲ್ಲಿ ಪ್ರದರ್ಶಿತವಾಗಿರುವ ಅಶ್ಲೀಲತೆ ಮತ್ತು ಹಿಂಸೆಯ ಅಬ್ಬರವು ವಿದ್ಯಾರ್ಥಿ ಸಮುದಾಯ ಹಾಗೂ ಸಮಾಜದ ಮೇಲೆ ಅತ್ಯಂತ ಗಂಭೀರವಾದ ದುಷ್ಪರಿಣಾಮ ಬೀರುತ್ತಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‍ಓ) ತೀವ್ರ ಆತಂಕ ವ್ಯಕ್ತಪಡಿಸಿದೆ.
ವ್ಯವಸ್ಥೆಯ ಲೋಪದೋಷಗಳನ್ನು ಪ್ರಶ್ನಿಸುವ ಅಥವಾ ಜನಪರ ಆಶಯಗಳನ್ನು ಹೊಂದಿರುವ ಚಿತ್ರಗಳ ಮೇಲೆ ಸಣ್ಣ ಕಾರಣಗಳಿಗಾಗಿ ಕತ್ತರಿ ಪ್ರಯೋಗಿಸುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯು, ಇಂತಹ ಕೆಳಮಟ್ಟದ ಸಾಹಿತ್ಯ ಮತ್ತು ಮಿತಿಮೀರಿದ ರಕ್ತಪಾತದ ದೃಶ್ಯಗಳಿಗೆ ಅನುಮತಿ ನೀಡುತ್ತಿರುವುದು ಅದರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ. ಸಮಾಜವನ್ನು ಸುಧಾರಿಸಬೇಕಾದ ಮಾಧ್ಯಮಗಳು ಕೇವಲ ವ್ಯಾಪಾರೀಕರಣದ ಬೆನ್ನತ್ತಿ, ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಬಿಂಬಿಸುವ ಅಶ್ಲೀಲ ಹಾಡುಗಳನ್ನು ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುತ್ತಿವೆ.
ಸಿನಿಮಾಗಳಲ್ಲಿ ತೋರಿಸಲಾಗುವ ಇಂತಹ ಪ್ರಚೋದನಾಕಾರಿ ದೃಶ್ಯಗಳಿಂದಾಗಿ ಇಂದಿನ ಎಳೆಯ ಮನಸ್ಸುಗಳು ದಾರಿ ತಪ್ಪುತ್ತಿವೆ. ಇತ್ತೀಚೆಗೆ ಬಳ್ಳಾರಿಯ ಹಾಸ್ಟೆಲ್‍ನಲ್ಲಿ ನಡೆದ ವಿದ್ಯಾರ್ಥಿಯ ಕೊಲೆ ಪ್ರಕರಣ ಹಾಗೂ ಶಾಲಾ ಮಕ್ಕಳು ಗಂಭೀರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಿನಿಮಾ ಪ್ರೇರಿತ ವಿಕೃತ ಸಂಸ್ಕೃತಿಯ ಫಲಿತಾಂಶವೇ ಆಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಬದಲಿಗೆ, ಇಂದಿನ ಸಿನಿಮಾಗಳು ಅವರಲ್ಲಿ ಕ್ರೌರ್ಯ ಮತ್ತು ಲೈಂಗಿಕ ವಿಕೃತಿಯನ್ನು ಬಿತ್ತುತ್ತಿವೆ. ಈ ಎಲ್ಲಾ ಬೆಳವಣಿಗೆಗಳಿಗೆ ಸೆನ್ಸಾರ್ ಮಂಡಳಿಯ ಬೇಜವಾಬ್ದಾರಿತನ ಸಹ ಒಂದು ಕಾರಣವಾಗಿದೆ. ಆದುದರಿಂದ, ಎಐಡಿಎಸ್‍ಓ ಜಿಲ್ಲಾ ಸಮಿತಿಯು ಸೆನ್ಸಾರ್ ಮಂಡಳಿಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಇಂತಹ ಅಶ್ಲೀಲ ಹಾಗೂ ಹಿಂಸಾತ್ಮಕ ಸಿನಿಮಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್‍ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ.ಆಗ್ರಹಿಸಿದ್ದಾರೆ. ವಿದ್ಯಾರ್ಥಿ ಸಮುದಾಯವು ಇಂತಹ ಸಂಸ್ಕೃತಿಹೀನ ಸಿನಿಮಾಗಳನ್ನು ತಿರಸ್ಕರಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.



























