
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೮: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮನವಿ ಸ್ವೀಕರಿಸಲು ಡಿ.ಸಿ. ತಡ ಮಾಡಿದ್ದಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಲು ವಿದ್ಯಾರ್ಥಿಗಳು ವಿಫಲ ಯತ್ನ ಮಾಡಿದರು.
ನಂತರ ಆಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿಯ ಕೇಂದ್ರೀಯ ಕಾರ್ಯ ಸಮಿತಿ ಸದಸ್ಯರಾದ ಸಚಿನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಕಳೆದ ೫-೬ ವರ್ಷಗಳಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಜೊತೆಗೆ ನಿಲ್ಲಬೇಕಾದ ಸರ್ಕಾರ ಕುಂಭನಿದ್ರೆಗೆ ಜಾರಿದೆ. ಸರಕಾರದ ಹತ್ತಿರ ಯಾವುದೇ ದೂರದೃಷ್ಟಿಯ ಯೋಜನೆಗಳು ಇಲ್ಲದೆ ಸಮಸ್ಯೆಗಳು ಬಂದಾಗ ಅವುಗಳಿಗೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಕಳೆದ ಮೂರು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ. ರಾಜ್ಯದಲ್ಲಿ ಒಟ್ಟು ೪೩ ಇಲಾಖೆಗಳಲ್ಲಿ ೨೮೪, ೮೮೧ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಅಭ್ಯರ್ಥಿಗಳು ಕಳೆದ ಐದಾರು ವರ್ಷಗಳಿಂದ ಸರ್ಕಾರ ನೇಮಕಾತಿಗಳನ್ನು ಮಾಡುತ್ತೇವೆ ಎಂಬ ನಂಬಿಕೆಯೊAದಿಗೆ ಪ್ರತಿ ತಿಂಗಳು ಹಣವನ್ನು ಖರ್ಚು ಮಾಡಿಕೊಂಡು ತರಬೇತಿಯನ್ನು ಪಡೆಯುತ್ತಾ ಸರಕಾರಿ ಸೇವೆಯನ್ನು ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅಂತಹ ಸಾವಿರಾರು ಅಭ್ಯರ್ಥಿಗಳ ವಯಸ್ಸು ಕೂಡಾ ಮೀರುತ್ತಿದೆ. ಆದರೆ ಸರಕಾರಕ್ಕೆ ಈ ಯಾವುದೇ ತೊಂದರೆಗಳನ್ನು ಗಮನಿಸದೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದAತಹ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ೭೯,೬೯೪ ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲೂ ೧೩,೫೯೯ ಹುದ್ದೆಗಳು ಖಾಲಿ ಇದ್ದು, ಇದರಿಂದ ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಸರ್ವರಿಗೂ ಶಿಕ್ಷಣವನ್ನು ನೀಡಬೇಕಾದದ್ದು ಸರಕಾರಗಳ ಕರ್ತವ್ಯ. ಆದರೆ ಸರಕಾರಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸರಕಾರ ಅನ್ಯಾಯ ಮಾಡುತ್ತಿದೆ ಎಂದರು.
ಎಬಿವಿಪಿಯ ಕಾನೂನು ವಿದ್ಯಾರ್ಥಿಗಳ ಪ್ರಮುಖ ಮಂಜುನಾಥ ಹಳ್ಳಿ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಶೋಚನೀಯವಾಗಿದೆ. ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಶೋಚನೀಯವಾಗಿದೆ. ಕರ್ನಾಟಕ ರಾಜ್ಯ ಮೊದಲು ಉನ್ನತ ಶಿಕ್ಷಣಕ್ಕೆ ಹೆಸರುವಾಸಿ ಆದ ರಾಜ್ಯ, ಪ್ರತಿಷ್ಠಿತ ವಿವಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಗಳನ್ನು ಸರಕಾರ ಕಡೆಗಣಿಸಿದೆ. ವಿವಿಗಳಿಗೆ ಯಾವುದೇ ಅನುದಾನ ನೀಡದೇ ಅವುಗಳನ್ನು ಕೇವಲ ವಿದ್ಯಾರ್ಥಿಗಳ ಶುಲ್ಕದ ಮೇಲೆ ನಡೆಸುವಂತೆ ಮಾಡುತ್ತಿದೆ. ಇದರಿಂದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಮೇಲೆ ಹಲವಾರು ಶುಲ್ಕಗಳನ್ನು ಹೇರುತ್ತಿದೆ. ಹಿಂದಿನ ಸರ್ಕಾರ ಸ್ಥಾಪಿಸಿದ ೦೯ ವಿಶ್ವ ವಿದ್ಯಾಲಯಗಳು ಮುಚ್ಚುವ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡುತ್ತಿದೆ. ಖಾಯಂ ಹುದ್ದೆಗಳ ನೇಮಕಾತಿ ಇಲ್ಲದ ಕಾರಣ ಸಕಾಲಕ್ಕೆ ಅಂಕಪಟ್ಟಿ, ಫಲಿತಾಂಶ ಹಾಗೂ ಇನ್ನಿತರ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನುಭವಿಸುವಂತಾಗಿದೆ. ವಿದ್ಯಾರ್ಥಿ ವೇತನ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆಯನ್ನು ಸರಕಾರ ಪ್ರಾರಂಭ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನವನ್ನು ತಲುಪಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹೊಡೆತ ಬೀಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಶಶಿಕಾಂತ ರಾಕ್ಲೆ, ಚೇತನ ಕೋರವಾರ, ದುಂಡಪ್ಪ ನಿಲೋಗಿ, ಬಾಲಾಜಿ ಬಿರಾದಾರ, ಬಸನಗೌಡ ಕೋನರಡ್ಡಿ, ಕಾರ್ತಿಕ ಬಿರಾದಾರ, ಅಜಯ, ಶಿಲ್ಪಾ ಪೂಜಾರಿ, ನಿಖಿತಾ ರೂಡಿ, ಅಜಯ ಸೋಲಂಕಿ, ಶಶಿಕುಮಾರ ಪಾಟೀಲ, ಸಾಯಿ ಬಿರಾದಾರ ಇತರರು ಭಾಗವಹಿಸಿದ್ದರು.

























