Home ಜಿಲ್ಲೆ ಕಲಬುರಗಿ ‘ಕಲಿಯುತ್ತಲೇ ಗಳಿಸಿ’ ಉಪಕ್ರಮದಡಿ 64 ವಿದ್ಯಾರ್ಥಿಗಳ ಆಯ್ಕೆ

‘ಕಲಿಯುತ್ತಲೇ ಗಳಿಸಿ’ ಉಪಕ್ರಮದಡಿ 64 ವಿದ್ಯಾರ್ಥಿಗಳ ಆಯ್ಕೆ

ಕಲಬುರಗಿ,ನ.10-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (ಸಿ.ಯು.ಕೆ.), ಎನ್‍ಬಿಸಿಸಿ (ಓಃಅಅ) ಪ್ರಾಯೋಜಿತ ‘ಸಾಮಾಜಿಕ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಾಮಾಜಿಕ ಮೌಲ್ಯ ಸೃಷ್ಟಿ ಹಾಗೂ
ಆತ್ಮನಿರ್ಭರ ಗ್ರಾಮಗಳ ನಿರ್ಮಾಣದ ಉದ್ದೇಶದ ಸ್ವಾವಲಂಬಿ ವಿದ್ಯಾರ್ಥಿವೇತನ ಕಾರ್ಯಕ್ರಮ’ ವನ್ನು ಆರಂಭಿಸಿದೆ. ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಉಪಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಗ್ರಾಮೀಣ ಸಮುದಾಯಗಳ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಈ ಮೂಲಕ ಶೈಕ್ಷಣಿಕ ಕಲಿಕೆ ಮತ್ತು ಸಾಮಾಜಿಕ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ವಿಶ್ವವಿದ್ಯಾಲಯ ಮತ್ತು ಗ್ರಾಮಗಳ ನಡುವಿನ ಸಹಭಾಗಿತ್ವವು ಸಾಮಾಜಿಕ ನಾವೀನ್ಯತೆಗೆ ಉತ್ತೇಜನ ನೀಡುವುದರ ಜೊತೆಗೆ, ಸುತ್ತಮುತ್ತಲಿನ ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಸುಸ್ಥಿರ ಸಮುದಾಯಗಳನ್ನಾಗಿರೂಪಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
‘ಕಲಿಯುತ್ತಲೇ ಗಳಿಸಿ’ ಯೋಜನೆಯಡಿ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳಿಂದ 64 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ಆಯ್ಕೆಯಾದ ಪ್ರತಿ ವಿದ್ಯಾರ್ಥಿಯು ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಅವರಿಗೆ ಮಾಸಿಕ 3,000 ಗೌರವಧನ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಮುದಾಯ ಸೇವೆ, ಪರಿಸರ ಸಂರಕ್ಷಣೆ ಮತ್ತು
ನಿರ್ವಹಣೆ, ಉದ್ಯಮಶೀಲತೆ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಮೂಲಕ ಗ್ರಾಮೀಣ ಸಮುದಾಯಗಳ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಆತ್ಮನಿರ್ಭರ ಭಾರತದ ಆಶಯವನ್ನು ಸಾಕಾರಗೊಳಿಸಲು ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ವೃತ್ತಿಪರ ತರಬೇತಿ ಹಾಗೂ ಸಮುದಾಯದ
ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ ಎಂದು ಹೇಳಿದರು. ಭೌತಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ, ಸಾಂಸ್ಕøತಿಕ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರಸಮತೋಲಿತ ಹಾಗೂ ಸರ್ವರನ್ನೂ ಒಳಗೊಂಡ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಯೋಜನೆಯ ಪ್ರಧಾನ ಸಂಶೋಧಕರಾದ ಪೆÇ್ರ. ಚನ್ನವೀರ ಆರ್. ಎಂ. ಅವರು ಮಾತನಾಡಿ, ಈ ಕಾರ್ಯಕ್ರಮವು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ‘ಏಕಾತ್ಮ ಮಾನವತಾವಾದ’ ತತ್ವಚಿಂತನೆಯಿಂದ ಪ್ರೇರಣೆ ಪಡೆದಿದೆ ಎಂದು ತಿಳಿಸಿದರು. ಈ ತತ್ವವು ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಪರಸ್ಪರ ಸಂಬಂಧ ಹಾಗೂ ಸಮನ್ವಯವನ್ನು ಪ್ರತಿಪಾದಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವುದರ ಜೊತೆಗೆ, ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಂಡು ಸಮಾಜ ಮತ್ತು ಗ್ರಾಮೀಣ ಅಭಿವೃದ್ಧಿಗೆ ಅರ್ಥಪೂರ್ಣ ಕೊಡುಗೆ ನೀಡಲು ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಶಿಕ್ಷಣ, ನಿರ್ವಹಣೆ, ಕಾನೂನು, ಸಾರ್ವಜನಿಕ ಆಡಳಿತ, ಭೂಗೋಳಶಾಸ್ತ್ರ, ಭೂವಿಜ್ಞಾನ, ಗ್ರಂಥಾಲಯ ವಿಜ್ಞಾನ, ಭೌತಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಗಣಿತಶಾಸ್ತ್ರ ಹಾಗೂ ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳು ವಿವಿಧ ಸಮುದಾಯ ಆಧಾರಿತ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಾಲಾ ಮಕ್ಕಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಪೂರಕ ಬೋಧನೆ ನೀಡುವುದು, ಗ್ರಾಮೀಣ ಯುವಕರು
ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳೆಸುವುದು, ಗ್ರಾಮಗಳ ಅಭಿವೃದ್ಧಿಗಾಗಿ ಡಿಜಿಟಲ್ ಸೂಕ್ಷ್ಮ ಯೋಜನೆಗಳನ್ನು ರೂಪಿಸುವುದು ಹಾಗೂ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು ಈ ಕಾರ್ಯಕ್ರಮದ ಪ್ರಮುಖ ಚಟುವಟಿಕೆಗಳಾಗಿವೆ.
ಈ ಕಾರ್ಯಕ್ರಮವು ಅಧ್ಯಾಪಕ ಮಾರ್ಗದರ್ಶಕರಾದ ಪೆÇ್ರ.ಬಸವರಾಜ್ ಕುಬಕಡ್ಡಿ, ಡಾ.ಓಯಿನಮ್ ಬೆಡಾಜಿತ್, ಡಾ.ಸುರೇಶ್ ಅನುಗಂಟಿ, ಡಾ.ಗುರುರಾಜ್ ಮುಕರಂಬಿ ಮತ್ತು ಡಾ.ಜಯಂತ ಬೊರುವಾ ಅವರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಅಧ್ಯಾಪಕ ಮಾರ್ಗದರ್ಶಕರು ವಿದ್ಯಾರ್ಥಿ ತಂಡಗಳೊಂದಿಗೆ ಗ್ರಾಮೀಣ ಸಮುದಾಯಗಳಲ್ಲಿ ನೇರವಾಗಿ ತೊಡಗಿಸಿಕೊಂಡು, ಸ್ಥಳೀಯ ಸಮಸ್ಯೆಗಳನ್ನು ಗುರುತಿಸುವುದು, ಅಭಿವೃದ್ಧಿಯ ಅಗತ್ಯಗಳನ್ನು ಅರಿಯುವುದು ಹಾಗೂ ಸುಸ್ಥಿರ ಗ್ರಾಮೀಣ ಅಭಿವೃದ್ಧಿಗೆ ಸೂಕ್ತ ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ರೂಪಿಸುವ ಕಾರ್ಯದಲ್ಲಿ ಸಹಕರಿಸಲಿದ್ದಾರೆ.
ಈ ಉಪಕ್ರಮವು ಉನ್ನತ ಶಿಕ್ಷಣವನ್ನು ಗ್ರಾಮೀಣ ಸಮುದಾಯಗಳ ತಳಮಟ್ಟದ ಅಭಿವೃದ್ಧಿಯೊಂದಿಗೆ ಬೆಸೆಯುವ ಮೂಲಕ ವಿಶ್ವವಿದ್ಯಾಲಯ ಮತ್ತು ಗ್ರಾಮಗಳ ನಡುವಿನ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಸಾಮಾಜಿಕ ಜವಾಬ್ದಾರಿ, ಪ್ರಾಯೋಗಿಕ ಕೌಶಲ್ಯ ಹಾಗೂ ಸಾಮಾಜಿಕ ಪ್ರಜ್ಞೆಯುಳ್ಳ ಯುವಜನರನ್ನು ರೂಪಿಸುವುದರ ಜೊತೆಗೆ, ವಿಕಸಿತ ಭಾರತ ಮತ್ತು ಆತ್ಮನಿರ್ಭರ ಗ್ರಾಮಗಳ ರಾಷ್ಟ್ರೀಯ ಆಶಯವನ್ನು ಸಾಕಾರಗೊಳಿಸಲು ಈ ಕಾರ್ಯಕ್ರಮ ಮಹತ್ವದ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದರು.