
ಕಲಬುರಗಿ,ನ.10-ಪುಸ್ತಕಗಳು ಜ್ಞಾನ, ಅನುಭವ ಹಾಗೂ ಜೀವನದ ಮಾರ್ಗದರ್ಶಕಗಳಾಗಿವೆ, ಒಂದು ಉತ್ತಮ ಪುಸ್ತಕ ನೆಮ್ಮದಿಯ ಬದುಕಿಗೆ ಬೆಳಕಾಗಿದೆ ಎಂದು ಖ್ಯಾತ ಸಾಹಿತಿ ಹಾಗೂ ಅನುವಾದಕ ಡಾ.ಬೋಡೆ ರಿಯಾಜ ಅಹಮದ್ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿಯ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ನಗರದ ಎಂ.ಎಸ್.ಕೆ. ಮಿಲ್ ಹತ್ತಿರದ ಲೇಔಟ್ನಲ್ಲಿ ಸಾಹಿತಿ ಹಾಗೂ ಶಿಕ್ಷಕಿ ಡಾ.ಪರ್ವೀನ್ ಸುಲ್ತಾನಾ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾಘನೀಯ, ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ರುಚಿಯನ್ನು ಹಚ್ಚುವ ವಿಶೇಷ ಕಾರ್ಯಕ್ರಮ ಪ್ರಾಧಿಕಾರದು ಎಂದು ಬೋಡೆ ಹೇಳಿದರು.
ಕಾರ್ಯಕ್ರಮ ಆಶಯ ನುಡಿಯನ್ನುಆಡುತ್ತಾ ಪ್ರಾಧಿಕಾರದ ರಾಜ್ಯ ಸದಸ್ಯರಾದ ಬಿ.ಎಚ್. ನೀರಗುಡಿ ಅವರು ಮಾತನಾಡಿ, ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರದರ್ಶನ, ವಿಚಾರ ಸಂಕಿರಣ, ಅಂಗಳದಲ್ಲಿ ತಿಂಗಳ ಪುಸ್ತಕ ಇಂತಹ ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳೊವುದರ ಜೊತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ-ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು. ಮನೆ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಮಾಡಿ ಅವರನ್ನು ಪ್ರಾಧಿಕಾರದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸುವದು ಎಂದ ನಿರಗುಡಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹೇಶ್ ಹೂಗಾರ ಅವರು ಮಾತನಾಡುತ್ತಾ ಮನೆ ಮನೆಗಳಲ್ಲಿ ಗ್ರಂಥಾಲಯ ನಿರ್ಮಾಣ ಆಗಬೇಕು ಪುಸ್ತಕಗಳಿಂದ ಮನುಷ್ಯನ ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ ಸಾಹಿತಿ ಹಾಗೂ ಶಿಕ್ಷಕರಾದ ಡಾ ಪರ್ವೀನ್ ಸುಲ್ತಾನಾ ಅವರು ಸಾಹಿತ್ಯದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿದ್ದೇವೆ. ಇನ್ನು ದೊಡ್ಡದಾದ ಗ್ರಂಥಾಲಯ ಮನೆಯಲ್ಲಿ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎನ್ನುವ ಮನೋಭಾವನೆ ಹೊಂದಿದ್ದೇನೆ ಎಂದು ಹೇಳಿದರು. ಅಂಬಾರಾಯ ಕೋಣೆ, ಮಲ್ಲಿಕಾರ್ಜುನ ಸಿರಸಗಿ,ಅಹ್ಮದ ಮೋಹಿಯೋದ್ದೀನ ಮಹೇಶ್ವರಿ ಮುಂತಾದವರು ಉಪಸ್ಥಿತರಿದ್ದರು.





















