Home ಜಿಲ್ಲೆ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ಮತ್ತು ಜಾಗೃತಿ ಶಿಬಿರ

ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣೆ ಮತ್ತು ಜಾಗೃತಿ ಶಿಬಿರ

ಬೀದರ್: ನಿರಂಜನ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಸೋಲಾಪುರ ರಸ್ತೆಯ ಓಡವಾಡದಲ್ಲಿರುವ ಶ್ರೀ ಅನಂತಶಯನ ದೇವಸ್ಥಾನದ ಸಮೀಪದ ನಿಸರ್ಗ ಕಾನ್ವೆಂಟ್ ಶಾಲೆಯಲ್ಲಿ ನ. ೫ರಂದು ಉಚಿತ ದಂತ ತಪಾಸಣೆ ಶಿಬಿರ ಹಾಗೂ ದಂತ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷ ಅಮಿತ್ ಸೋಲಾಪುರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಹಲ್ಲಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಬಡ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉಚಿತ ದಂತ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದಂತ ವೈದ್ಯ ಡಾ. ಉದಯ ಸಿಂಗ್ ಅವರು ಮಕ್ಕಳಿಗೆ ಹಲ್ಲುಗಳ ಆರೋಗ್ಯ, ಸ್ವಚ್ಛತೆ ಹಾಗೂ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವ ವಿಧಾನ, ದಿನನಿತ್ಯದ ದಂತ ಆರೈಕೆ ಮತ್ತು ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟುವ ಕುರಿತು ಅರಿವು ಮೂಡಿಸಿದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ರಷ್ ಮತ್ತು ಟೂತ್‌ಪೇಸ್ಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಾಲಕರಾದ ರಾಜಕುಮಾರ ಬಿರದಾರ, ಸುಧಾಕರ ಗುಮ್ಮ, ನಾಗಪ್ಪ, ಅಜಯ, ನವೀನ ಕುಮಾರ, ಅಮರ ಮೀರಗಂಜ, ಕಾಳಪ್ಪ ತದಲಾಪುರ, ಸಂಗಪ್ಪ ಬಿರದಾರ, ಸಂಜು ಸೋಲಾಪುರ, ಸಂತೋಷ ಗುಮ್ಮ, ಶಾಲೆಯ ಮುಖ್ಯ ಶಿಕ್ಷಕಿ ಶೃತಿ ಬರಗಾಲೆ, ಶಿಕ್ಷಕಿಯರಾದ ಪ್ರಿಯಾಂಕಾ, ಅಶ್ವಿನಿ, ಅನಿತಾ, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.