
ಬೀದರ :ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನ.7ರಂದು ಆಯೋಜಿಸಲಾಗುತ್ತಿರುವ ಜಿಲ್ಲೆಯ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಹೋರಾಟಗಾರ, ಚಿಂತಕ ಮಾರುತಿ ಬೌದ್ಧೆ ಮತ್ತು ಅವರ ಧರ್ಮಪತ್ನಿ ಕಸ್ತೂರಬಾಯಿ ಬೌದ್ಧೆ ಅವರನ್ನು ಸಮ್ಮೇಳನಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಅವರು ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮಾರುತಿ ಬೌದ್ಧೆ ದಂಪತಿಗೆ ನೀಡಿ ಅಧಿಕೃತವಾಗಿ ಆಹ್ವಾನಿಸಿದರು. ಸಮ್ಮೇಳನದ ಉದ್ದೇಶ, ಮಹತ್ವ ಹಾಗೂ ಸಿದ್ಧತೆಗಳ ಕುರಿತು ಚರ್ಚಿಸಿ, ದಂಪತಿಗೆ ಗೌರವಪೂರ್ವಕವಾಗಿ ಅಭಿನಂದಿಸಿದರು.
ಸುರೇಶ ಚನ್ನಶೆಟ್ಟಿ ಮಾತನಾಡಿ, “ಬೀದರ ಜಿಲ್ಲೆಯ ಸಾಮಾಜಿಕ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯಲಿರುವ ಈ ಪ್ರಥಮ ದಲಿತ ಬಂಡಾಯ ಸಮ್ಮೇಳನವು ದಲಿತ ಚಳವಳಿಯ ಇತಿಹಾಸ, ಸಮಾನತೆಯ ಆಶಯಗಳು, ಸಾಮಾಜಿಕ ನ್ಯಾಯದ ಹೋರಾಟಗಳು ಹಾಗೂ ಶೋಷಿತ ಸಮುದಾಯಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಮಹತ್ವದ ವೇದಿಕೆಯಾಗಲಿದೆ” ಎಂಬ ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜರುಗುತ್ತಿರುವ ದಲಿತ ಬಂಡಾಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಹೋರಾಟಗಾರರು, ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಂಘಟಕರು ಹಾಗೂ ಹಿತೈಷಿಗಳು ಮನವಿ ಮಾಡಿದ್ದಾರೆ.
ಈ ವೇಳೆ ಪ್ರಮುಖರಾದ ವಿನಯಕುಮಾರ ಮಾಳಗೆ, ಮಹೇಶ ಗೋರನಾಳಕರ, ಸಂಜೀವಕುಮಾರ ಅಲ್ಲೂರೆ, ವಿನೋದಕುಮಾರ ಬಂದಗೆ, ಅಭಿ ಕಾಳೆ, ವಿಜಯಕುಮಾರ ಸೋನಾರೆ, ಸಿದ್ಧಾರೂಢ ಭಾಲ್ಕೆ, ಬಾಬುರಾವ ದಾನಿ, ಎಂ.ಎಸ್.ಮನೋಹರ, ಶಿವಶಂಕರ ಟೋಕರೆ, ಟಿ.ಎಂ.ಮಚ್ಚೆ ಮತ್ತಿತರರಿದ್ದರು.





















