Home ಜಿಲ್ಲೆ ಕಲಬುರಗಿ ಸಮಾಜಮುಖಿ ಸನ್ಯಾಸತ್ವಕ್ಕೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಮಾದರಿ: ಡಾ. ಎಸ್.ಎಂ. ಜಾಮದಾರ

ಸಮಾಜಮುಖಿ ಸನ್ಯಾಸತ್ವಕ್ಕೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಮಾದರಿ: ಡಾ. ಎಸ್.ಎಂ. ಜಾಮದಾರ

ಗದಗ: ಸ್ವಾಮೀಜಿಗಳು ತಮ್ಮ ಸನ್ಯಾಸತ್ವದ ಏಕತಾನತೆಯನ್ನು ಕಳೆದುಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯ ಎಂಬ ಶ್ರೇಷ್ಠ ನಿಲುವು ಹೊಂದಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಇಡೀ ಸನ್ಯಾಸಿ ಸಮುದಾಯಕ್ಕೇ ಮಾದರಿಯಾಗಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಗುರುವಾರ ಆಯೋಜಿಸಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 8ನೇ ಪುಣ್ಯಸ್ಮರಣೆ ಹಾಗೂ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಐವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಮಾಜಿ ಕಾರ್ಮಿಕ ಸಚಿವ ಹಾಗೂ ಹಿರಿಯ ಹೋರಾಟಗಾರ ಡಾ. ಎಸ್.ಕೆ. ಕಾಂತಾ, ಖ್ಯಾತ ಮನೋರೋಗ ತಜ್ಞ ಡಾ. ಆನಂದಪಾಂಡುರಂಗಿ (ಮರಣೋತ್ತರ), ಶರಣ ಸಾಹಿತ್ಯ ಪ್ರಸಾರಕ ಐ.ಆರ್. ಮಠಪತಿ, ಖ್ಯಾತ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಹಾಗೂ ಬಸವತತ್ವ ಪ್ರಸಾರಕ್ಕೆ ಮೀಸಲಾದ ಬಸವ ಮೀಡಿಯಾ ಸಂಸ್ಥೆಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ ?1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಕೆ. ಕಾಂತಾ, ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಬಸವೇಶ್ವರರು ಬೋಧಿಸಿದಂತೆ ಕಾಯಕದಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ. ಆದರೂ ಇಂದಿಗೂ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ರೈತರು ಹಾಗೂ ಶ್ರಮಿಕರ ದುಡಿಮೆಗೆ ತಕ್ಕ ಮೌಲ್ಯ ದೊರೆಯಬೇಕು. ಶರಣರ ಸಮಾನತೆಯ ತತ್ವವನ್ನು ಸಮಾಜದಲ್ಲಿ ಜಾರಿಗೊಳಿಸಲು ಕ್ರಾಂತಿಕಾರಿ ಮನೋಭಾವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬಸವತತ್ವ ಸಾರ್ವಕಾಲಿಕ ಸತ್ಯ

ಸಾನ್ನಿಧ್ಯ ವಹಿಸಿದ್ದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ಪ್ರಗತಿಪರ ವಿಚಾರಧಾರೆ ಹಾಗೂ ಜಾತ್ಯತೀತ ತತ್ವಗಳ ಮೇಲೆ ನಿರಂತರವಾಗಿ ಆಘಾತಗಳು ನಡೆಯುತ್ತಿವೆ. ಆದರೆ ಬಸವತತ್ವ ಸಾರ್ವಕಾಲಿಕವಾಗಿದ್ದು, ಎಷ್ಟೇ ದಾಳಿಗಳಾದರೂ ಶರಣರ ಚಿಂತನೆಗಳನ್ನು ಅಳಿಸಲು ಸಾಧ್ಯವಿಲ್ಲ. ನಾವು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ; ಬದಲಾಗಿ ಬಸವತತ್ವದ ಬುನಾದಿಯ ಮೇಲೆ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಮೂರು ಕೃತಿಗಳ ಬಿಡುಗಡೆ

ಕಾರ್ಯಕ್ರಮದಲ್ಲಿ ಡಾ. ಎನ್.ಜಿ. ಮಹಾದೇವಪ್ಪ ಅವರ ವಚನಗಳಲ್ಲಿ ಅನುಭಾವ, ಡಾ. ಪ್ರದೀಪಕುಮಾರ ಹೆಬ್ರಿ ಅವರ ಬೆಳಗ ಮಹಾಬೆಳಗು ಹಾಗೂ ಆರ್.ಎಸ್. ಲೆಕ್ಕದ ಅವರ ಷೇಕ್ಸ್‍ಪಿಯರ್ ಮತ್ತು ಕಂದಗಲ್ ಹನುಮಂತರಾಯ: ತೌಲನಿಕ ಅಧ್ಯಯನ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಹಾಗೂ ಸೇವಾರತ್ನ ಪೆÇ್ರ. ಎಸ್.ಎಸ್. ಪಟ್ಟಣಶೆಟ್ಟರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಇಳಕಲ್‍ನ ಗುರುಮಹಾಂತ ಮಹಾಸ್ವಾಮಿಗಳು, ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಶಿರೋಳ ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಕೋರಣೇಶ್ವರ ಶ್ರೀಗಳು, ಗುರುಶಾಂತದೇವ ಶ್ರೀಗಳು ಉಪಸ್ಥಿತರಿದ್ದರು. ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಶರಣಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.