Home ಜಿಲ್ಲೆ ಕಲಬುರಗಿ ಭೀಕರ ಬರ : 50 ಸಾವಿರ ಪರಿಹಾರ ನೀಡಲು ಆಗ್ರಹ

ಭೀಕರ ಬರ : 50 ಸಾವಿರ ಪರಿಹಾರ ನೀಡಲು ಆಗ್ರಹ

ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಎದುರಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಸಮಯ ವ್ಯರ್ಥ ಮಾಡುತ್ತಿದೆ. ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ರೈತರ ಹಿತ ರಕ್ಷಣೆಗೆ ಮುಂದಾಗಬೇಕು ಎಂದು ಕರವೇ (ಶಿವರಾಮೇಗೌಡ ಬಣದ) ಗೌರವಾಧ್ಯಕ್ಷ ರುದ್ರಪ್ಪ ಎಸ್ ವಾಲೀಕಾರ (ರವಿ ವಾಲಿ) ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಭೀಕರ ಬರ ಎದುರಾಗಿದ್ದರೂ ಸರಕಾರ ರೈತರಿಗೆ ಅವಮಾನ ಮಾಡುವ ರೀತಿಯಲ್ಲಿ ಕೇವಲ 2500 ರೂ. ಇನ್ ಪುಟ್ ಸಬ್ಸಿಡಿ ಘೋಷಣೆ ಮಾಡಿದೆ. ಕನಿಷ್ಠ 50 ಸಾವಿರ ರೂ.ಪರಿಹಾರ ಒದಗಿಸಬೇಕಿತ್ತು. ರೈತರು ಸಂಕಷ್ಟದಲ್ಲಿದ್ದು ಬೆಳೆಸಾಲ ಮನ್ನಾ ಮಾಡಬೇಕು.ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು.ಸಮರ್ಪಕ ವಾಗಿ ವಿದ್ಯುತ್ ಪೂರೈಸಬೇಕು ಎಂದು ಅವರು ಆಗ್ರಹಿಸಿದರು.ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ.ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗಿವೆ.ಹೀಗಾಗಿ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬಿತ್ತನೆ, ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಸೇರಿ ನಾನಾ ವೆಚ್ಚಗಳನ್ನು ಭರಿಸಿ ಬೆಳೆ ಬೆಳೆದ ರೈತರಿಗೆ ಮಳೆಯ ಅಭಾವದಿಂದ ನಿರೀಕ್ಷಿತ ಇಳುವರಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.