
ನವದೆಹಲಿ,ಜು. ೧೩: ಸುಪ್ರೀಂ ಕೋರ್ಟ್ನಲ್ಲಿ ದಶಕಗಳಿಂದ ಧೂಳು ಹಿಡಿಯುತ್ತಿರುವ ಅತ್ಯಂತ ಹಳೆಯ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ನಾಲ್ಕು ವಿಶೇಷ ನ್ಯಾಯಪೀಠಗಳನ್ನು ರಚಿಸಲಾಗಿದ್ದು, ಇಂದಿನಿಂದಲೇ (ಜುಲೈ ೧೩) ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.
ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಬೃಹತ್ ಸುಧಾರಣಾ ಕ್ರಮದಡಿ, ಮೊದಲ ಹಂತದಲ್ಲಿ ಸುಮಾರು ೮೦೦ ಅತ್ಯಂತ ಹಳೆಯ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇವುಗಳ ನಿರಂತರ ವಿಚಾರಣೆ ನಡೆಸಲು ಆದ್ಯತೆ ನೀಡಲಾಗಿದೆ.
ಈ ಐತಿಹಾಸಿಕ ಸುಧಾರಣೆ ಕುರಿತು ಪ್ರತಿಕ್ರಿಯಿಸಿರುವ ಸಿಜೆಐ ಸೂರ್ಯ ಕಾಂತ್, “ಕೇವಲ ಪ್ರಕರಣಗಳನ್ನು ತೀರ್ಮಾನಿಸುವುದು ಮಾತ್ರವಲ್ಲ, ನಾಗರಿಕರು ಕಾನೂನಿನ ಆಡಳಿತದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಗದಿತ ಅವಧಿಯಲ್ಲಿ ನ್ಯಾಯ ಒದಗಿಸುವುದು ನ್ಯಾಯಾಂಗದ ಪ್ರಮುಖ ಜವಾಬ್ದಾರಿಯಾಗಿದೆ. ದಶಕಗಳಿಂದ ಬಾಕಿ ಉಳಿದಿರುವ ಪ್ರತಿಯೊಂದು ಪ್ರಕರಣದ ಹಿಂದೆಯೂ ವರ್ಷಗಟ್ಟಲೆ ನ್ಯಾಯಕ್ಕಾಗಿ ಕಾಯುತ್ತಿರುವ ಒಬ್ಬ ಸಾಮಾನ್ಯ ಅರ್ಜಿದಾರನಿದ್ದಾನೆ. ಪ್ರಕರಣ ಹಳೆಯದಾಗಿದೆ ಎಂಬ ಕಾರಣಕ್ಕೆ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
ಯಾವೆಲ್ಲಾ ಪೀಠಗಳು? ಕಾರ್ಯವೈಖರಿ ಹೇಗೆ?
ಹೊಸ ರೋಸ್ಟರ್ (ಕಾರ್ಯಸೂಚಿ) ಅಧಿಸೂಚನೆಯ ಪ್ರಕಾರ, ವಾರದ ಪ್ರಮುಖ ದಿನಗಳಾದ ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಈ ವಿಶೇಷ ಪೀಠಗಳು ಯಾವುದೇ ಇತರೆ ಸಾಂದರ್ಭಿಕ ವಿಚಾರಣೆಗಳಿಲ್ಲದೆ, ಕೇವಲ ಹಳೆಯ ಪ್ರಕರಣಗಳನ್ನು ಮಾತ್ರ ಪ್ರಮುಖವಾಗಿ ಆಲಿಸಲಿವೆ.
ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎಸ್.ವಿ.ಎನ್. ಭಟ್ಟಿ ಅವರ ನೇತೃತ್ವದ ಎರಡು ವಿಭಾಗೀಯ ಪೀಠಗಳು ಅತ್ಯಂತ ಹಳೆಯ ಸಿವಿಲ್ ಪ್ರಕರಣಗಳನ್ನು ಮಾತ್ರ ಪ್ರತ್ಯೇಕವಾಗಿ ವಿಚಾರಣೆ ನಡೆಸಲಿವೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಉಜ್ಜಲ್ ಭುಯಾನ್ ಅವರ ನೇತೃತ್ವದ ಇನ್ನೆರಡು ವಿಭಾಗೀಯ ಪೀಠಗಳು ಹಳೆಯ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಮುಡಿಪಾಗಿರಲಿವೆ.
ಮಾಹಿತಿಗಳ ಪ್ರಕಾರ, ಪ್ರತಿ ಪೀಠಕ್ಕೆ ಸದ್ಯ ತಲಾ ೨೦೦ ರಂತೆ ಒಟ್ಟು ೮೦೦ ಪ್ರಕರಣಗಳನ್ನು ನಿಯೋಜಿಸಲಾಗಿದ್ದು, ನಿರಂತರ ಮತ್ತು ತಡೆರಹಿತ ವಿಚಾರಣೆಯ ಮೂಲಕ ಇವುಗಳಿಗೆ ತಾರ್ಕಿಕ ಅಂತ್ಯ ಹಾಡುವುದು ಪೀಠಗಳ ಮುಖ್ಯ ಉದ್ದೇಶವಾಗಿದೆ.
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಅಂಕಿ-ಅಂಶಗಳ ಪ್ರಕಾರ, ಸುಪ್ರೀಂ ಕೋರ್ಟ್ನಲ್ಲಿ ಸದ್ಯ ಒಟ್ಟು ೯೫,೯೧೧ ಪ್ರಕರಣಗಳು ಬಾಕಿ ಇವೆ. ಇದರಲ್ಲಿ ೭೪,೧೪೫ ಸಿವಿಲ್ ಮತ್ತು ೨೧,೭೬೬ ಕ್ರಿಮಿನಲ್ ಪ್ರಕರಣಗಳಾಗಿವೆ. ಇವುಗಳಲ್ಲಿ ಶೇಕಡಾ ೩೯.೪ ರಷ್ಟು ಪ್ರಕರಣಗಳು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಅವಧಿಯದ್ದಾಗಿದ್ದು, ಉಳಿದ ಬೃಹತ್ ಪಾಲು ದಶಕಗಳಷ್ಟು ಹಳೆಯದಾದ ಪ್ರಕರಣಗಳಿಂದ ಕೂಡಿದೆ.
ದೇಶದ ನ್ಯಾಯಾಲಯಗಳಲ್ಲಿ ಒಟ್ಟಾರೆ ೫ ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇರುವುದನ್ನು ಇತ್ತೀಚೆಗಷ್ಟೇ ನೆನಪಿಸಿದ್ದ ಸಿಜೆಐ, ಕೇವಲ ನ್ಯಾಯಾಲಯದ ಒಳಗಿನ ವಿಚಾರಣೆಯಿಂದಲೇ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲ; ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಇತ್ಯರ್ಥ ಮಾರ್ಗಗಳನ್ನೂ ಬಲಪಡಿಸಬೇಕಿದೆ ಎಂದು ಪ್ರತಿಪಾದಿಸಿದ್ದರು. ಅದರ ಬೆನ್ನಲ್ಲೇ ಈಗ ಸುಪ್ರೀಂ ಕೋರ್ಟ್ನ ಆಡಳಿತಾತ್ಮಕ ವ್ಯವಸ್ಥೆಯೊಳಗೆ ಈ ಕ್ರಾಂತಿಕಾರಿ ಕ್ರಮವನ್ನು ಜಾರಿಗೆ ತರಲಾಗಿದೆ.






























