Home ಜಿಲ್ಲೆ ಶ್ರೀಮದ್ ಭಾಗವತ ಭುವನದ ಭಾಗ್ಯ

ಶ್ರೀಮದ್ ಭಾಗವತ ಭುವನದ ಭಾಗ್ಯ

ಸತ್ತೂರು,ಮೇ22: ಶ್ರೀಮದ ಭಾಗವತವು ಮಹೋನ್ನತ ಪುರಾಣವಾಗಿದ್ದು, ಭುವನದ ಭಾಗ್ಯವಾಗಿದೆ. ವೇದವ್ಯಾಸ ದೇವರಿಂದ ರಚಿತವಾದ ಈ ಪುರಾಣವು, ರಚನೆಯ ಕ್ರಮದಲ್ಲಿಯೂ ಕೊನೆಯ ಪುರಾಣವಾಗಿದ್ದು, ಅಂತೆಯೇ “ಸಿದ್ದಸ್ತು ಸಿದ್ದಾಂತ” ಎಂಬುದು ಇದರ ಹೆಗ್ಗಳಿಕೆ. ಇದನ್ನು ಉಪದೇಶಿಸಿದ ಶ್ರೀ ಸುಕಾಚಾರ್ಯರು, ಮೃತ್ಯುಂಜಯನಾದ ರುದ್ರ ದೇವರಾಗಿದ್ದಾರೆ. ಅವರಿಂದ ಶ್ರವಣ ಮಾಡಿದ ಪರೀಕ್ಷಿತ ಮಹಾರಾಜನು, ಮೃತ್ಯುವನ್ನು ಜಯಿಸಿದನು. ಆದ್ದರಿಂದ ಇದು ಮೃತ್ಯುಂಜಯ ಶಾಸ್ತ್ರ ಎಂದು ಡಾ. ಪಂ. ನಾರಾಯಣ ಆಚಾರ ಧೂಳಖೇಡ ಹೇಳಿದರು

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ ಭಾಗವತ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡುತ್ತಾ, ಶ್ರೀಮದ ಭಾಗವತವು ಪ್ರಪಂಚದಲ್ಲಿರುವ ಎಲ್ಲ ಸ್ತರದ ಜೀವಿಗಳಿಗೆ , ಬಾಲಕರಿಗೆ, ಗೃಹಸ್ಥರಿಗೆ , ಸ್ತ್ರೀಯರಿಗೆ, ಸನ್ಯಾಸಿಗಳಿಗೆ ಹೀಗೆ ಎಲ್ಲರಿಗೂ ಬದುಕಿನ ದಿವ್ಯ ಪಾಠವನ್ನು ಉಪದೇಶಿಸುವ ಗ್ರಂಥ ಮೊಕ್ಷೋಪಯೋಗಿ ಮಾರ್ಗವನ್ನು ಸಮರ್ಥವಾಗಿ ಬೋಧಿಸುವ ಗ್ರಂಥ. ಆದ್ದರಿಂದ ನಾವು ಸೋಮಾರಿಗಳಾಗದೆ ಶ್ರೀ ಭಾಗವತವನ್ನು ಶ್ರವಣ ಮಾಡಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಖಟಾಂಗ ರಾಜ, ಪರೀಕ್ಷಿತ ರಾಜರೇ ಇದಕ್ಕೆ ಪ್ರಮಾಣ. ಈ ಅಧಿಕಮಾಸದಲ್ಲಿ ಈ ಗ್ರಂಥದ ಪಾರಾಯಣ ಶ್ರವಣ, ಮನನ ಮಾಡುವವರು ಶ್ರೀಹರಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ ಎಂದು ಸುಂದರವಾಗಿ ವಿಶ್ಲೇಷಿಸಿದರು.

ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಅಂಬೇಕರ, ಪ್ರಕಾಶ ದೇಸಾಯಿ, ಡಿ.ಕೆ. ಜೋಶಿ, ಪಾಂಡುರಂಗ ಕುಲಕರಣಿ, ಗೋಪಾಲಕೃಷ್ಣ ಹುನಗುಂದ, ಶ್ರೀನಿವಾಸ ಪಟ್ಟಣಕೊಡಿ, ಎಲ್. ವಿ. ಜೋಶಿ, ಅನಿಲ, ಆನಂದ ದೇಶಪಾಂಡೆ, ಹನುಮಂತ ಬಿಜಾಪುರ, ಡಾ. ರವಿ ಧುಮ್ಮವಾಡ, ಡಾ, ಗಿರೀಶ ಕುಲಕರ್ಣಿ, ವಿನಾಯಕ ಗುರುನಾಥ ಸರ್ದೆಷ್ಮುಖ, ಧೀರೇಂದ್ರ ತಂಗೋಡ, ಲಕ್ಷ್ಮೇಶ್ವರ ,ಬಹದ್ದೂರ ದೇಸಾಯಿ ,ಸಂಜೀವ ಗೊಳಸಂಗಿ, ಸಂಜೀವ ಜೋಶಿ ಉಪಸ್ಥಿತರಿದ್ದರು.