
ಬೀದರ್:ಫೆ.೨೬: : ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಎದುರಿಸಬೇಕು. ಈ ವರ್ಷ ನಮ್ಮ ತಾಲ್ಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಗುಣಾತ್ಮಕವಾಗಿ ಸುಧಾರಿಸಬೇಕು ಎಂಬುದು ನಮ್ಮೆಲ್ಲರ ಸಂಕಲ್ಪವಾಗಿದೆ. ಕೇವಲ ತೇರ್ಗಡೆಯಾಗುವುದು ನಮ್ಮ ಗುರಿಯಾಗಬಾರದು, ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಅಂಕಗಳೊAದಿಗೆ ಯಶಸ್ವಿಯಾಗಬೇಕು ಇದಕ್ಕಾಗಿ ಶಿಕ್ಷಕರು ಹಂತ ಹಂತವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಬೀದರ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ ರಾವ್ ಪಾಟೀಲ್ ಹೇಳಿದರು.
ಅವರು ಬುಧವಾರ ಗಾದಗಿ ಗ್ರಾಮ ಪಂಚಾಯತ್ ವತಿಯಿಂದ ಗಾದಗಿ ಗ್ರಾಮದಲ್ಲಿ ನಡೆದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಶಿಕ್ಷಣ ಇಲಾಖೆಯು ನೀಡುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಫಲಿತಾಂಶ ಸುಧಾರಣೆಗೆ ನೀಲನಕ್ಷೆಯನ್ನು ಸಿದ್ಧಪಡಿಸಿಕೊಳ್ಳಿ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಕೇವಲ ಶಾಲೆ ಮಾತ್ರವಲ್ಲದೆ ಪೋಷಕರ ಪಾತ್ರವೂ ದೊಡ್ಡದಿದೆ, ಮನೆಯಲ್ಲಿ ಟಿವಿ ಮೊಬೈಲ್ ಹೆಚ್ಚಾಗಿ ಬಳಸಬೇಡಿ. ಶಾಲಾ ಹಂತದಲ್ಲಿ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ, ಮಕ್ಕಳ ಅಧ್ಯಯನದ ಕಡೆಗೆ ಗಮನಹರಿಸುವಂತೆ ಪ್ರೇರೇಪಿಸಬೇಕು.
ಪ್ರತಿ ವಿಷಯದ ಕಠಿಣತೆಯನ್ನು ಹೋಗಲಾಡಿಸಲು ಮಕ್ಕಳಿಗೆ ಸುಲಭ ಕಲಿಕಾ ವಿಧಾನಗಳನ್ನು ಪರಿಚಯಿಸಿ. ಈ ಬಾರಿ ನಮ್ಮ ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವಂತಾಗಲು ನಿಮ್ಮೆಲ್ಲರ ಶ್ರಮ ಮತ್ತು ಸಹಕಾರ ಅತ್ಯಗತ್ಯ. ನಿಮ್ಮ ಯಾವುದೇ ಶೈಕ್ಷಣಿಕ ಸಮಸ್ಯೆಗಳಿಗೆ ಇಲಾಖೆಯು ಸದಾ ಬೆಂಬಲ ನೀಡಲಿದೆ ಎಂದು ತಾಲೂಕ ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕರು ಸುದೇಶ್ ಕೊಡ್ಡೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಇತರೆ ಅಧಿಕಾರಿಗಳು ಶಾಲೆ ಶಿಕ್ಷಕ ವೃದ್ಧದವರು ಹಾಗೂ ಎಸ್. ಎಸ್. ಎಲ್. ಸಿ ಮಕ್ಕಳು ಉಪಸ್ಥಿತರಿದ್ದರು.




























