Home ಜಿಲ್ಲೆ ಸೂಕ್ಷ್ಮ ಸಂವೇದನೆಗಳಿಗೆ ಮಾತೃಭಾಷೆ ಉತ್ತಮ

ಸೂಕ್ಷ್ಮ ಸಂವೇದನೆಗಳಿಗೆ ಮಾತೃಭಾಷೆ ಉತ್ತಮ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.14: ಮಾತೃಭಾಷೆಯಲ್ಲಿ ಮಾತ್ರ ಭಾವನಾತ್ಮಕ ಸೂಕ್ಷ್ಮ ಸಂವೇದನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವೆಂದು ಡಾ. ರಾಜಶೇಖರ ಎಸ್ ಗಾಣಿಗೇರ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಶ್ರೀ ಗುರು ತಿಪ್ಪೇರುದ್ರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದಿ. ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಸ್ಮಾರಕ ದತ್ತಿ ಹಾಗೂ ದಿ. ಕುಪ್ಪಗಲ್ಲು ನಾಗಪ್ಪ ಅವರ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,  ಕನ್ನಡ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಜಾಗತೀಕರಣ ಸಂದರ್ಭದಲ್ಲಿ ಇಂಗ್ಲಿಷ್ ಸರ್ವವ್ಯಾಪಿಯಾಗಿರುವ ದಿನಮಾನಗಳಲ್ಲಿ ಮಾತೃ ಭಾಷೆಗಳ ಉಳಿವಿಗಾಗಿ  ಶ್ರಮಿಸುವ ಅನಿವಾರ್ಯತೆ ಇದೆ ಎಂದು ಡಾ.  ರಾಜಶೇಖರ ಗಾಣಿಗೇರ ತಿಳಿಸಿದರು.

ಸಮರಸವೇ ಜೀವನ ಎಂದು ಸಾರಿದ ವರಕವಿ ಬೇಂದ್ರೆಯವರು ಇಡೀ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿದರೂ ಜೀವನ ಪ್ರೀತಿಯನ್ನು ತಮ್ಮ ಸಾಹಿತ್ಯದಲ್ಲಿ ಒಡಮೂಡಿಸಿದರು ಎಂದು ಸತ್ಯಂ ಶಿಕ್ಷಣ ಸಂಸ್ಥೆಯ ಹಿರಿಯ ಉಪನ್ಯಾಸಕ ಅಲಂಬಾಷಾ ದ.ರಾ. ಬೇಂದ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶ್ರೀ ಗುರು ತಿಪ್ಪೇರುದ್ರ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಎಸ್.ಎನ್. ರುದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕ.ಸಾ.ಪವು ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪಸರಿಸುವ ಕಾರ್ಯವನ್ನು ಗಡಿನಾಡಿನಲ್ಲಿ ಸುವ್ಯವಸ್ಥಿತವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಹಿರಿಯ ಪತ್ರಕರ್ತ ಎಂ.ಇ. ಜೋಷಿ, ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಜಿ. ಶಂಕರ್, ದತ್ತಿ ದಾನಿಗಳ ಪುತ್ರರಾದ ಕುಪ್ಪಗಲ್ಲು ವೀರೇಶ್, ಪುತ್ರಿ ಕುಪ್ಪಗಲ್ಲು ಗಿರಿಜಾ, ಕರ್ನಾಟಕ ಯುವಕ ಸಂಘದ ಮುಂಡಾಸದ ಮಲ್ಲಿಕಾರ್ಜುನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶ್ರೀಮತಿ  ಪದ್ಮಾವತಿ ಕಾರ್ಯಕ್ರಮ  ನಿರೂಪಿಸಿದರು, ಉಪನ್ಯಾಸಕಿ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್ ವಂದನಾರ್ಪಣೆ ಸಲ್ಲಿಸಿದರು.