Home ಜಿಲ್ಲೆ ವೀ.ವಿ. ಸಂಘದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ:ಜಿಲ್ಲಾಧಿಕಾರಿ

ವೀ.ವಿ. ಸಂಘದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ:ಜಿಲ್ಲಾಧಿಕಾರಿ

ಸಂಜೆವಾಣಿ ವಾರ್ತೆ

ಹೊಸಪೇಟೆ.ಮೇ. 22 ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಈ ಭಾಗದಲ್ಲಿ ಶೈಕ್ಷಣಿಕವಾಗಿ ಉತ್ತಮ ಕೆಲಸವನ್ನು ಮಾಡುತ್ತಿದೆ.  ವೀವಿ ಸಂಘದ ಪಿಡಿಐಟಿ ಸೇರಿದಂತೆ ಇತರೆ ಕಾಲೇಜುಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ ಎಂದು  ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ಸ್ಥಳೀಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿಯೂ ಉನ್ನತ ಶಿಕ್ಷಣವನ್ನು ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಅಭ್ಯಾಸದಿಂದ  ಯಶಸ್ಸನ್ನು  ಸಾಧಿಸಬಹುದು ಎಂದು ಹೇಳಿದರು.

ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ಕರುಣಾಕರ ರೈ ಬಿ. ಮಾತನಾಡಿ, ಇಂದಿನ ಯುವಕರಿಗೆ ಪ್ರಸ್ತುತ ಪೀಳಿಗೆಯು ಅತ್ತ್ಯುತ್ತಮ ವರವಾಗಿದೆ. ಭಾರತವು ಯುವ ಶಕ್ತಿಯೊಂದಿಗೆ ಜಾಗತಿಕವಾಗಿ ಮುನ್ನಡೆಯುತ್ತಿದೆ. 2014 ರಲ್ಲಿ ಕೇವಲ 380 ಸ್ಟಾರ್ಟ್ ಅಪ್ ಗಳು ಇದ್ದವು ಆದರೆ ಈಗ 1.90 ಲಕ್ಷ ಸ್ಟಾರ್ಟ್ ಅಪ್ ಗಳು ಶೇ 30 ರಿಂದ 40 ರ ವಯಸ್ಸಿನ ಯುವಕರಿಂದ ನಡೆಯುತ್ತಿವೆ. ಎ ಐ (ಕೃತಕ ಬುದ್ಧಿಮತ್ತೆ) ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಎ ಐ ಬಂದಿದೆ ಎಂದು ಯಾರೂ ಆತಂಕಗೊಳ್ಳಬಾರದು ಎ ಐ ನಿಂದ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದರೆ ವಿದ್ಯಾರ್ಥಿಗಳು ಎ ಐ ಅನ್ನು ಪಳಗಿಸುವ ಚಾಕಚಕ್ಯತೆಯನ್ನು ಹೊಂದಿರಬೇಕು ಎಂದು ಹೇಳಿದರು. 

ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ತೋರಣಗಲ್ಲಿನ  ಜೆಎಸ್ಡಬ್ಲ್ಯೂ ಸ್ಟೀಲ್ಸ್ ಲಿಮಿಟೆಡ್ ನ ಮಾಜಿ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ, ವಿಶೇಷ ಆಹ್ವಾನಿತರಾಗಿ  ಸ್ಥಳೀಯ ಎಂ.ಎಸ್.ಪಿ.ಎಲ್ ನ ಕಾರ್ಪೊರೇಟ್ ಕಮ್ಯುನಿಕೇಷನ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಪ್ರಭುದೇವಪ್ಪ ಭಾಗವಹಿಸಿ ಮಾತನಾಡಿದರು.

ಚಿನ್ನದ ಪದಕ: ಸಮಾರಂಭದಲ್ಲಿ ಆರು ವಿಭಾಗದ ಪ್ರತಿಭಾವಂತ ಟಾಪರ್ಸ್ಗಳಾದ ಮ್ಯೆಕಾನಿಕಲ್ ವಿಭಾಗದ ಕು.ಜಹೀರ್ ಅಹಮದ್ ಖಾನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಕು.ಎಚ್ ಏನ್.ಸಂಜಯ್, ಗಣಕಯಂತ್ರ ವಿಭಾಗದ ಕು. ಸಮೀನಾ ಫಾತಿಮಾ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕು. ಆಫ್ರೀನ್.ಎಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕು. ಕೌಸರ್ ಜಬೀನ್, ಹಾಗೂ ಎಂ.ಬಿ.ಎ. ವಿಭಾಗದ ಕು. ಜೊಯ್ ಪ್ರಿಯ. ಬಿ ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಒಂದು ಲಕ್ಷ ರೂ ಮೌಲ್ಯದ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

ನಗದು ಬಹುಮಾನ: ವೀ.ವಿ. ಸಂಘದ ವತಿಯಿಂದ ಎಲ್ಲಾ ವಿಭಾಗzಲ್ಲಿ ಅತ್ಯಂತ ಹೆಚ್ಚಿನ ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ಮೊತ್ತದ ನಗದು ಬಹುಮಾನವನ್ನು ಹಾಗೂ ಇತರ ದತ್ತಿ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ  ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ ವಹಿಸಿದ್ದರು. ಸಮಾರಂಭದಲ್ಲಿ ಬಲ್ಡೊಟಾ ಗ್ರೂಪ್ನ ಉಪಾಧ್ಯಕ್ಷ ಹೆಚ್.ಕೆ. ರಮೇಶ್, ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಆಡಳಿತ ಮಂಡಳಿಯ ಸದಸ್ಯರಾದ ಐ.ಎನ್. ಸಂಗನ ಬಸಪ್ಪ, ಅನಿಲ್ ಆರ್.ಜವಳಿ, ಬಿ ಚಂದ್ರಮೌಳಿ, ವೀವಿ ಸಂಘದ ಸದಸ್ಯ  ಗುಡೆಕೋಟೆ ನಾಗರಾಜ್, ಮುಖಂಡರಾದ ಮೆಟ್ರಿ ಮಲ್ಲಿಕಾರ್ಜುನ, ಕೋರಿ ಶೆಟ್ರು ನಿಂಗಪ್ಪ, ಕುಮಾರ ಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ.ರೋಹಿತ್ ಯು.ಎಂ., ಉಪಪ್ರಾಂಶುಪಾಲರಾದ ಡಾ.ಪಾರ್ವತಿ ಕಡ್ಲಿ, ’ಸಿಂಚನ 2026’ ಕಾರ್ಯಕ್ರಮದ ಸಂಯೋಜಕ ಡಾ.ರವಿಕುಮಾರ್ ಎಸ್.ಪಿ, ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕು. ಅಪ್ರಮೇಯ ದಿಗ್ಗಾವಿ ಪ್ರಾರ್ಥಿಸಿದರು, ಡಾ.ಪಾರ್ವತಿ ಕಡ್ಲಿ ಅತಿಥಿಗಳನ್ನು ಪರಿಚಯಿಸಿದರು, ಡಾ.ವಸಂತಮ್ಮ. ಹೆಚ್ ಸ್ವಾಗತಿಸಿದರು,  ಪ್ರೊ.ವೀಣಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ  ಮಂಜುನಾಥ್ ಕೆ.ಎಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿದರು. ಡಾ.ರವಿಕುಮಾರ್ ವಂದಿಸಿದರು. ಡಾ.ಕೆ.ಶರಣಬಸಮ್ಮ ನಿರೂಪಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.