
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.06. ಅಗತ್ಯಕ್ಕೆ ತಕ್ಕಂತೆ ಮುಂಗಾರಿನಲ್ಲಿ ಬಿತ್ತನೆಗೆ ಬೇಕಾಗುವ ಬೀಜ ರಸಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ದಾಸ್ತಾನು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿರುವ ರೈತರು, ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳನ್ನು ದಾಸ್ತಾನು ಮಾಡಬೇಕು. ಯೂರಿಯಾ ಗೊಬ್ಬರ ಪಡೆಯಲು ಏಫ್ಐಡಿ ಕಡ್ಡಾಯ ರದ್ದುಗೊಳಿಸಿ ರೈತರು ಬೆಳೆದ ಬೆಳೆಗೆ ಬೇಕಾಗುವಷ್ಟು ನೀಡಲು ಕ್ರಮಕೈಗೊಳ್ಳಬೇಕು ಹಾಗೂ ತಿರಸ್ಕರಿಸಿರುವ ಬಗರ್ ಹುಕುಂ ಅರ್ಜಿಗಳನ್ನು ಮತ್ತು ಮಾಜಿ ಇನಾಂ ಭೂಮಿ ಅರ್ಜಿ ಇತ್ಯರ್ಥ ಪಡಿಸಬೇಕು ಮತ್ತು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಅರಣ್ಯಿಕರಣದ ಹೆಸರಿನಲ್ಲಿ ಪಟ್ಟಾ ವಂಚನೆ ತಡೆಯಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಮುಖಂಡ ಎನ್.ಯಲ್ಲಾಲಿಂಗ, ಜಿಲ್ಲೆಯಲ್ಲಿ ಸಾವಿರಾರು ಬಡ ದಲಿತ, ಹಿಂದುಳಿದ ವರ್ಗಗಳ ರೈತ ಕುಟುಂಬಗಳು ಅಲ್ಪಸ್ವಲ್ಪ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇಂತಹ ಬಡ ರೈತರು ಸರ್ಕಾರಗಳು ಹೊರಡಿಸಲಾದ ಬಕರ್ ಹುಕುಂ, ಇನಾಂ ಭೂಮಿ, ಅರಣ್ಯ ಭೂಮಿಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಹಿಡುವಳಿದಾರರ ಹಕ್ಕನ್ನು ಪ್ರತಿಪಾದಿಸಲು ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾರ್ಯಾಂಗ ಮತ್ತು ಶಾಸಕಾಂಗವನ್ನು ಒತ್ತಾಯಿಸುತ್ತಾ ಬಂದಿದ್ದಾರೆ.
ಆದರೆ ಸರ್ಕಾರವು ಹಿಡುವಳಿದಾರರ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ಹಿಂಬರಹ ನೀಡುತ್ತಿರುವುದು ಕಂಡು ಬರುತ್ತಿದೆ ಇದರಿಂದಾಗಿ ಭೂ ವಂಚಿತರಾಗಿ ಕೂಲಿ ಕೆಲಸಕ್ಕಾಗಿ ಹಳ್ಳಿಗಳನ್ನು ಬಿಟ್ಟು ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಎಲ್ಲಾ ಬಡವರಿಗೆ ಪಟ್ಟಾ ನೀಡಬೇಕು.ಮುಂದಿನ ತಿಂಗಳಲ್ಲಿ ಮುಂಗಾರು ಆರಂಭವಾಗಲಿದ್ದು ಲಕ್ಷಾಂತರ ಎಕರೆಗಳಿಗೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳ ದಾಸ್ತಾನಿಗೆ ತಾವುಗಳು ಕೈಗೊಂಡ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಂಘದ ಜೊತೆಗೆ ಜಂಟಿ ಸಭೆ ಆಗಬೇಕು ಹಾಗೂ ಯೂರಿಯಾ ಗೊಬ್ಬರ ಪಡೆಯಲು ಎಫ್ಐಡಿ ಕಡ್ಡಾಯ ವಾಪಾಸ್ ಪಡೆದು ರೈತರಿಗೆ ಬೇಕಾಗುವಷ್ಟು ಗೊಬ್ಬರ ವಿತರಿಸಿ ಬೆಳೆ ಬೆಳೆಯಲಿಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಆನಂದ್ ಮಾತನಾಡಿ, ಬಕರ್ ಹುಕುಂ, ಇನಾಂ ಭೂಮಿ ಅರಣ್ಯ ಭೂಮಿಗಳ ಸಾಗುವಳಿದಾರರು ಸಲ್ಲಿಸಲಾದ ಫಾರಂ ೫೭, ೫೩, ೫೧, ಫಾರಂ೧ ಅರ್ಜಿಗಳಿಗೆ ಪಟ್ಟಾ ನೀಡಬೇಕು. ಸಬ್ಸಿಡಿ ರೂಪದಲ್ಲಿ ರೈತರ ಬೆಳೆಗಳಿಗೆ ಬೀಜ ರಸಗೊಬ್ಬರಗಳು ಅಗತ್ಯಕ್ಕೆ ತಕ್ಕಂತೆ ಪೂರೈಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಯೂರಿಯಾ ಗೊಬ್ಬರ ಪಡೆಯಲು ಏಫ್ಐಡಿ ಕಡ್ಡಾಯ ಗೊಳಿಸಬಾರದು ಮತ್ತು ಕಾಲಾವಕಾಶ ನೀಡಬೇಕು ಫರ್ಟಿಲೈಜರ್ ವಿತರಕರಿಗೆ ಯಾವುದೇ ಷರತ್ತುಗಳನ್ನು ವಿಧಿಸಬಾರದು ಇದರ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು, ಕರಿಯಣ್ಣ, ನಬೀಸಾಬ್, ಕಣಿಮಪ್ಪ, ಎ.ಸ್ವಾಮಿ, ದುರುಗಪ್ಪ, ಗಣೇಶ ಸೇರಿದಂತೆ ಇತರೆ ರೈತರು ಇದ್ದರು.






















