
ಸಂಜೆವಾಣಿ ನ್ಯೂಸ್
ಮೈಸೂರು:ಏ.03:- ವಿದ್ಯಾರ್ಥಿಗಳು ಶ್ರದ್ಧೆಯಿಂದ, ತಾಳ್ಮೆಯಿಂದ ಒಂದೇ ಗುರಿ ಇಟ್ಟುಕೊಂಡು ಸಾಧನೆ ಮಾಡಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ತಿಳಿಸಿದರು.
ರಾಜರಾಜೇಶ್ವರಿನಗರದಲ್ಲಿರುವ ಡಿ. ದೇವರಾಜು ಅರಸು ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ನಿಲಯದ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಚೆನ್ನಾಗಿ ಓದಿಕೊಂಡು ಖ್ಯಾತಿ, ಹಣ, ಆರೋಗ್ಯವನ್ನು ಹೇಗೆ ಶಿಕ್ಷಣದ ಮೂಲಕ ಪಡೆದುಕೊಳ್ಳಬೇಕು ಎಂಬುದನ್ನು ಚಿಂತನೆ ಮಾಡಬೇಕು. ತಾಯಿತಂದೆ, ಗುರುಹಿರಿಯರಿಗೆ ಗೌರವ ಕೊಡಬೇಕು. ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ನ್ಯಾಯ ನೀತಿ, ಧರ್ಮ, ತಾಳ್ಮೆ ಇದ್ದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಪ್ರತಿಯೊಬ್ಬರು ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುಬೇಕು ಎಂದರು.
ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ಮಾತನಾಡಿ ಇಂದು ಜಗತ್ತಿಗೆ ಸಾರಿದ ಬುದ್ಧಪೂರ್ಣಿಮ ದಿನ ಹಾಗೂ ದೇಶವನ್ನು ಕಟ್ಟಲು ಶ್ರಮಿಸುತ್ತಿರುವ ಕಾರ್ಮಿಕರ ದಿನಾಚರಣೆಯ ದಿನ ಈ ಸಮಾರಂಭವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ತಳಸಮುದಾಯದ ಜನರ ಏಳಿಗೆಗೆ ಶ್ರಮಿಸಿದ ಡಿ. ದೇವರಾಜ ಅರಸುರವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿನಿಯರು ಓದಬೇಕು ಅವರು ನಿಮಗೆ ಸ್ಪೂರ್ತಿಯಾಗುತ್ತಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದರು.
ನಿವೃತ್ತ ನಿಲಯಪಾಲಕರಾದ ಮಂಜುಳಾ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದಿದವರೇ ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಯಾರು ಕದಿಯಲಾರದ ಸಂಪತ್ತು ವಿದ್ಯೆಯಾಗಿದ್ದು ಕಷ್ಟಪಟ್ಟು ಸರಸ್ವತಿಯನ್ನು ಒಲಿಸಿಕೊಳ್ಳಿರಿ. ತಂದೆತಾಯಿ ಗುರುಗಳಿಗೆ ಗೌರವ ಕೊಡಿರಿ, ಗುರಿಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು. ಸಮಾರಂಭದಲ್ಲಿ ನಿಲಯಪಾಲಕರಾದ ಮಹಾಲಕ್ಷ್ಮಿ, ಲಕ್ಷ್ಮಿ, ನಾಗರತ್ನ, ಸರಸ್ವತಿ, ವಿದ್ಯಾರ್ಥಿನಿಯವರಾದ ಸಿಂಧು, ಮಹೇಶ್ವರಿ ಜಿ., ಪೂಜಾ, ರಕ್ಷಿತಾ, ಚಂದನ ಆರ್. ಉಪಸ್ಥಿತರಿದ್ದರು.






















