
ಸಂಜೆವಾಣಿ ನ್ಯೂಸ್
ಮೈಸೂರು.ಏ.12:- ಏ.14ರಂದು ಬೆಳಗ್ಗೆ 9ಕ್ಕೆ ಆದಿ ಕರ್ನಾಟಕ ಮಹಾಸಂಸ್ಥೆ, ದೊಡ್ಡ ಗರಡಿ ಮತ್ತು ಚಿಕ್ಕಗರಡಿ ಸಂಘ ಹಾಗೂ ಅಶೋಕಪುರಂನ ವಿವಿಧ ಸಂಘಟನೆಗಳೊಡಗೂಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಹೆಲಿಕಾಪ್ಟರ್ನಲ್ಲಿ ಬಾಬಾ ಸಾಹೇಬರ ಪ್ರತಿಮೆಗೆ ಪುಷ್ಪಾರ್ಚನೆ, ಬೃಹತ್ ಮೆರವಣಿಗೆ ಮೂಲಕ ನಗರದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಮೊದಲಿಗೆ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ಮೆರವಣಿಗೆಗೆ ಅಶೋಕಪುರಂ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಸಂಸದ ಯದುವೀರ್, ಪಿ. ಸಿದ್ದರಾಜು, ಟಿ.ಎಸ್. ಶ್ರೀವತ್ಸ, ಎಂ.ಕೆ. ಸೋಮಶೇಖರ್ ಇನ್ನಿತರರು ಹಾಜರಿರುವರು. ಅಲ್ಲಿಂದ ವಿವಿಧ ಕಲಾ ತಂಡಗಳೊಡನೆ ಹೊರಡುವ ಭವ್ಯ ಮೆರವಣಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ ತಿಳಿಸುವ ಸ್ತಬ್ಧಚಿತ್ರಗಳನ್ನು ಒಳಗೊಂಡು ಅಶೋಕ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಪುರಭವನ ಬಳಿಯ ಅಂಬೇಡ್ಕರ್ ಪ್ರತಿಮೆ ತಲುಪಿ ಅಲ್ಲಿ ಮಾಲಾರ್ಪಣೆ ಮಾಡಲಾಗುವುದೆಂದರು.
ಈ ಬಾರಿಯ ವಿಶಿಷ್ಟತೆ ಎಂಬಂತೆ ಮಧ್ಯಾಹ್ನ ಸುಮಾರು 12 ರ ವೇಳೆಗೆ ಅಶೋಕ ವೃತ್ತ ಹಾಗೂ ರಾಮಸ್ವಾಮಿ ವೃತ್ತದ ಬಳಿ ಇರಿಸುವ ಅಂಬೇಡ್ಕರ್ ಪ್ರತಿಮೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿಗೈಯ್ಯಲಾಗುವುದು. ಇಂದು ಅಂಬೇಡ್ಕರ್ ಜಯಂತಿ ಆಚರಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ, ಅವರ ವಿಚಾರಧಾರೆಗಳಿಂದಾಗಿ ಇಡೀ ವಿಶ್ವಕ್ಕೇ ಹರಡಿದೆ. ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ, ಅಂಧ ಶ್ರದ್ಧೆಗಳಿಂದ ಬಳಲುತ್ತಿದ್ದ ದೇಶಕ್ಕೆ ಅವರು ಬೆಳಕು ನೀಡಿದವರಾಗಿದ್ದಾರೆ. ಇಂದು ದೇಶದಲ್ಲಿ ಎಚ್ಚೆತ್ತ ಸಮಾಜ ಇರಲು ಅವರು ನೀಡಿದ ದೂರದೃಷ್ಟಿಯ ಸಂವಿಧಾನವೇ ಕಾರಣವಾಗಿದೆ. ಹೀಗಾಗಿ ಅವರ ವಿಚಾರಧಾರೆ ಇನ್ನಷ್ಟು ಅನುಸರಿಸುವ ಅಗತ್ಯವಿದೆ ಎಂದರು.
ಇನ್ನು, ಅಶೋಕಪುರಂ, ಗಾಂಧೀ ನಗರಗಳಲ್ಲಿ ಇಡೀ ತಿಂಗಳು ಅಂಬೇಡ್ಕರ್ ಹಬ್ಬ ಆಚರಣೆಗೆ ಚಿಂತನೆ ನಡೆದಿದೆ. ಇಂದು ನಾವು ಆಚರಿಸುವ ಯಾವುದೇ ಹಬ್ಬ ನಮಗೆ ಪೂರಕವಾದುವಲ್ಲ. ನಾವು ಪ್ರಕೃತಿ ಆರಾಧಕರಾಗಿದ್ದೇವೆ. ಮಾರಮ್ಮ, ಕಾಳಮ್ಮ ಮೊದಲಾದವರೆಲ್ಲ ನಮ್ಮ ಪೂರ್ವೀಕರೇ ಆಗಿದ್ದಾರೆ. ಇನ್ನು, ಸಮಾನತೆ ಸಾರುವ ಬೌದ್ಧ ಭಾರತ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸುತ್ತಿದ್ದೇವೆ. ಇದಲ್ಲದೆ, ಅಂಬೇಡ್ಕರ್ ಜಯಂತಿಯ ಭವ್ಯ ಮೆರವಣಿಗೆಯಲ್ಲಿ ಮದ್ಯಸೇವಿಸಿದ ಯಾರೂ ಪಾಲ್ಗೊಳ್ಳಬಾರದು, ಧೂಮಪಾನ ಮಾಡದಂತೆ ಮನವೊಲಿಸಲಾಗುತ್ತಿದೆ. ಇದಕ್ಕೆ ಅಂಬೇಡ್ಕರ್ ಅವರ ಜೀವನವೇ ಪ್ರೇರಣೆಯಾಗಿದೆ ಎಂಧರು.
ಇನ್ನಿತರ ಮುಖಂಡರಾದ ಸುನಿಲ್, ಶಿವಸ್ವಾಮಿ, ಮಹೇಶ್, ನಾಗರಾಜು, ಜೆ. ಜೈಕುಮಾರ್, ಪುಟ್ಟರಾಜು ಮೊದಲಾದವರಿದ್ದರು.

























