
ಗದಗ, ಮೇ3: ಇತಿಹಾಸ ಪ್ರಸಿದ್ಧ ಲಕ್ಕುಂಡಿಯ ಗತ ವೈಭವವನ್ನು ಕಂಡಾಗ ಬಿಸಿಲು, ಸೆಕೆ ಯಾವುದೂ ಅನಿಸದೇ, ಹೆಮ್ಮೆಯ ಭಾವನೆ ಮಾತ್ರ ಮೂಡುತ್ತದೆ. ಲಕ್ಕುಂಡಿ ವಿಶ್ವಪಾರಂಪರಿಕ ಪಟ್ಟಿಗೆ ಆದಷ್ಟು ಬೇಗ ಸೇರಲಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಲಕ್ಕುಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪತ್ತೆಯಾದ ಪುರಾತತ್ವ ವಸ್ತುಗಳು ಮತ್ತು ಬಂಗಾರದ ನಾಣ್ಯಗಳ ಘಟನೆ ಬಳಿಕ ಲಕ್ಕುಂಡಿ ರಾಜ್ಯದಷ್ಟೇ ಅಲ್ಲದೆ ದೇಶದ ಗಮನ ಸೆಳೆದಿದೆ. ಈ ಹಿಂದೆ ಕೇವಲ ಹಾದು ಹೋಗುವ ಸ್ಥಳವೆಂದು ಭಾವಿಸಿದ್ದ ಲಕ್ಕುಂಡಿ, ಈಗ ತನ್ನ ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ತಿಳಿಸಿದರು.
ಸಚಿವ ಎಚ್. ಕೆ. ಪಾಟೀಲ ಅವರ ಪ್ರಯತ್ನಗಳಿಂದ ಲಕ್ಕುಂಡಿಯ ಇತಿಹಾಸ ಜನರಿಗೆ ಪರಿಚಿತವಾಗಿದ್ದು, ಈ ಕಾರ್ಯ ಎಲ್ಲರೂ ಹೆಮ್ಮೆ ಪಡುವಂತಹದ್ದು. ಲಕ್ಕುಂಡಿಯ ಶಿಲ್ಪಕಲೆ, ದೇವಾಲಯಗಳು, ಕೆರೆಗಳು ಮತ್ತು ಪ್ರಾಚೀನ ನಿರ್ಮಾಣಗಳು ಅಚ್ಚರಿ ಮೂಡಿಸುವಂತಿವೆ. ಇಂದಿನ ತಂತ್ರಜ್ಞಾನದಲ್ಲಿಯೂ ಸಾಧ್ಯವಿಲ್ಲವೆನ್ನಿಸುವ ಸೂಕ್ಷ?ಮ ಶಿಲ್ಪಗಳನ್ನು ಆಗಿನ ಕಾಲದಲ್ಲಿ ನಿರ್ಮಿಸಿರುವುದು ಅಚ್ಚರಿಯ ಸಂಗತಿ. ಇದು ನಮ್ಮ ಪೂರ್ವಜರ ಕೌಶಲ್ಯಕ್ಕೆ ಸಾಕ್ಷಿ ಎಂದು ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಕೆಲಸ ಮಾಡಬೇಕು. ಲಕ್ಕುಂಡಿಯಂತಹ ಪುರಾತತ್ವ ಸಂಪತ್ತು ಪ್ರದೇಶದ ಅಭಿವೃದ್ಧಿಗೆ ದಾರಿ ತೋರಿಸಬಲ್ಲದು. ಈ ಹಿನ್ನೆಲೆಯಲ್ಲಿ ಲಕ್ಕುಂಡಿಯನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಗುರುತಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಗ್ರಾಮಸ್ಥರು ತಮ್ಮ ಬಳಿ ಸಿಗುವ ಪುರಾತತ್ವ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸುತ್ತಿರುವುದು ಅಪೂರ್ವ ಉದಾಹರಣೆ. ಇಂತಹ ಹೃದಯ ಶ್ರೀಮಂತಿಕೆ ಎಲ್ಲೆಡೆ ಕಾಣುವುದಿಲ್ಲ. ಲಕ್ಕುಂಡಿಯ ಕೆರೆಗಳು, ದೇವಾಲಯಗಳು ಹಾಗೂ ಪುರಾತತ್ವ ಸ್ಮಾರಕಗಳನ್ನು ಅಭಿವೃದ್ಧಿಪಡಿಸಿ, ದೇಶಕ್ಕೆ ಮಾದರಿಯಾದ ಪುರಾತತ್ವ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಲಕ್ಕುಂಡಿ ದೇಶದ ಅಗ್ರ ಪುರಾತತ್ವ ಕೇಂದ್ರವಾಗಿಸಲು ಯೋಜನೆಗೆ ಸಿದ್ಧತೆ: ಸಚಿವ ಎಚ್.ಕೆ. ಪಾಟೀಲ
ಗದಗ : ಐತಿಹಾಸಿಕ ಲಕ್ಕುಂಡಿಯನ್ನು ರಾಷ್ಟ್ರ ಮಟ್ಟದಲ್ಲಿ ಅಗ್ರ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಸಮಗ್ರ ಯೋಜನೆ ರೂಪಿಸುತ್ತಿದೆ. ಮುಂದಿನ ಒಂದು ವರ್ಷದಲ್ಲಿ 100ಕ್ಕೂ ಹೆಚ್ಚು ದೇವಾಲಯಗಳು ಮತ್ತು ಬಾವಿಗಳನ್ನು ಅನಾವರಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಲಕ್ಕುಂಡಿಯಲ್ಲಿ ಶನಿವಾರ ಏರ್ಪಡಿಸಿದ್ದ 6 ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ, ದಶ ಬಾವಿ, ದಶ ದೇವಾಲಯ ಅನಾವರಣ, ಪ್ರಾಚ್ಯವಶೇಷಗಳ ಅನ್ವೇಷಣಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಪಂಚ ದೇವಾಲಯ ಮತ್ತು ಪಂಚಬಾವಿಗಳ ಅನಾವರಣ ಯಶಸ್ವಿಯಾಗಿ ನಡೆದಿದೆ, ಇದೀಗ 10 ಭಾವಿ, ದೇವಾಲಯಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಗಿದೆ. ಈ ಮೂಲಕ ಪುರಾತತ್ವ ಸ್ಮಾರಕಗಳ ಸಂಖ್ಯೆ 70ರ ಗಡಿ ದಾಟಿದೆ ಎಂದು ಹೇಳಿದರು.
ಲಕ್ಕುಂಡಿಯ ಅನೇಕ ದೇವಾಲಯಗಳು ಮತ್ತು ಬಾವಿಗಳು ಕಾಲಕ್ರಮೇಣ ನಿರ್ಲಕ್ಷ?ಯದಿಂದ ತಮ್ಮ ಗುರುತನ್ನು ಕಳೆದುಕೊಂಡಿದ್ದವು. ಅವುಗಳನ್ನು ಪತ್ತೆಹಚ್ಚಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಸರ್ಕಾರ ಮತ್ತು ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. 2026ರೊಳಗೆ ಕನಿಷ್ಠ 50 ಬಾವಿ ಮತ್ತು 50 ದೇವಾಲಯಗಳನ್ನು ಅನಾವರಣಗೊಳಿಸಿ 100ರ ಗಡಿಯನ್ನು ದಾಟುವ ಗುರಿ ಹೊಂದಲಾಗಿದೆ. ಇದಕ್ಕೆ ಲಕ್ಕುಂಡಿ ಜನರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
10.16 ಕೋಟಿ ಬಿಡುಗಡೆ:
ಸ್ಮಾರಕಗಳ ಅಭಿವೃದ್ಧಿಗೆ ಪ್ರಸ್ತುತ 10.16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಲಗುಂಡಿಯಲ್ಲಿ ಬಸವೇಶ್ವರ ದೇವಾಲಯಕ್ಕೆ 1.58 ಕೋಟಿ, ಕನ್ನೇರ ಬಾವಿಗೆ 1.70 ಕೋಟಿ, ಮಲ್ಲಿಕಾರ್ಜುನ ದೇವಾಲಯಕ್ಕೆ 1.67 ಕೋಟಿ, ವಿರೂಪಾಕ್ಷೇಶ್ವರ ದೇವಾಲಯಕ್ಕೆ 1.81 ಕೋಟಿ, ಚಂದ್ರಮೌಳೇಶ್ವರ ದೇವಾಲಯಕ್ಕೆ 1.80 ಕೋಟಿ, ಕಲ್ಮಠ ದ್ವಾರಬಾಗಿಲು ಮತ್ತು ಬಾವಿಗೆ 1.50 ಕೋಟಿ ಮಂಜೂರಾಗಿದೆ. ಲಕ್ಕುಂಡಿಯಲ್ಲಿ ದೇಶದಲ್ಲೇ ಅತ್ಯುತ್ತಮ ಬಯಲು ವಸ್ತು ಸಂಗ್ರಹಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಈಗಾಗಲೇ 1200ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳಿಗೆ ಸಂಖ್ಯೆ ನೀಡಲಾಗಿದೆ. ಶೀಘ್ರದಲ್ಲೇ ಈ ಸಂಖ್ಯೆ 2000 ದಾಟುವ ನಿರೀಕ್ಷೆಯಿದೆ ಎಂದು ಹೇಳಿದರು.
ಗ್ರಾಮಸ್ಥರ ಪ್ರಾಮಾಣಿಕತೆ ಶ್ಲಾಘನೆ
ಬಂಗಾರದ ನಾಣ್ಯಗಳಂತಹ ಅಮೂಲ್ಯ ವಸ್ತುಗಳನ್ನು ಸಹ ಸರ್ಕಾರಕ್ಕೆ ಒಪ್ಪಿಸುತ್ತಿರುವ ಲಕ್ಕುಂಡಿ ಜನರ ಪ್ರಾಮಾಣಿಕತೆ ಅಪರೂಪ. ಇತ್ತೀಚೆಗೆ ಲಕ್ಕುಂಡಿಯಲ್ಲಿ ಪತ್ತೆಯಾದ ಬಂಗಾರದ ಮೌಲ್ಯವನ್ನು ತಜ್ಞರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಲಕ್ಕುಂಡಿ?ಗದಗ?ಕಪ್ಪತಗುಡ್ಡ ಪ್ರವಾಸಿ ವಲಯಗಳಾಗಿ ರೂಪುಗೊಂಡಿದೆ. ಮುಖ್ಯಮಂತ್ರಿಗಳ ಬೆಂಬಲದೊಂದಿಗೆ ಲಕ್ಕುಂಡಿಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪ್ರಸ್ತಾವನೆಗಳನ್ನು ಮಂಜೂರು ಮಾಡಲಾಗುವುದು. ಲಕ್ಕುಂಡಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಬಹುದಾದ ಪುರಾತತ್ವ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಎಚ್ ಕೆ ಪಾಟೀಲರು ಹೇಳಿದರು.






















