
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಏ.29 ಈರುಳ್ಳಿ ಬೆಳೆಗಾರ ರೈತನೊಬ್ಬ ಮಾರುಕಟ್ಟೆ ಬೆಲೆ ಕುಸಿತದಿಂದ ಮನನೊಂದು ತನ್ನ ಹೊಲದಲ್ಲಿದ್ದ ಈರುಳ್ಳಿ ಬೆಳೆದ ಬೆಳಗೆ ಜಾನುವಾರಗಳನ್ನು ಬಿಟ್ಟು ನಾಶ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಗುಡಿ ಚಿಮ್ಮನಹಳ್ಳಿ ಗ್ರಾಮದ ರೈತ ವರ್ಕೇರಿ ಹಾಲಪ್ಪ ಅವರು ಸುಮಾರು 80 ಸಾವಿರ ವೆಚ್ಚದಲ್ಲಿ ಈರುಳ್ಳಿ ಬೆಳೆದಿದ್ದರು. ಆದರೆ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುವ ವೇಳೆಗೆ ಬೆಲೆ ಭಾರೀ ಕುಸಿತ ಕಂಡಿದ್ದು, ವೆಚ್ಚವನ್ನೇ ವಾಪಸ್ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಈ ಹಿನ್ನೆಲೆ ಆಕ್ರೋಶ ಮತ್ತು ನಿರಾಶೆಯಿಂದ ಅವರು ದನಗಳನ್ನು ಹೊಲಕ್ಕೆ ಬಿಟ್ಟು ಮೇಯಿಸುತ್ತಿದ್ದು 4 ತಿಂಗಳುಗಳ ಕಾಲ ಬೆಳೆಸಿ ಕಾಪಾಡಿದ ಬೆಳೆ ಕೈಸೇರದೇ ರೈತನ ಕಣ್ಣಲ್ಲಿ ನೀರು ತರಿಸಿದೆ.
ಕಳೆದ ಎರಡು ಮೂರು ವರ್ಷಗಳಿಂದ ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರು ಅತೀವೃಷ್ಟಿ ಹಾಗೂ ಬೆಲೆ ಕುಸಿತದಿಂದ ನಿರಂತರ ನಷ್ಟ ಅನುಭವಿಸುತ್ತಿದ್ದಾರೆ.ನಿರಂತರ ಬೆಲೆ ಅಸ್ಥಿರತೆಯಿಂದ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಕೂಲಿ ಆಳು ಗೊಬ್ಬರ ಹಾಗೂ ಒಕ್ಕಣಿ ಸೇರಿದಂತೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆಯಾದರೂ ಮಾರುಕಟ್ಟೆ ಬೆಲೆ ರೈತರ ಕೈಗೆ ಲಾಭ ತರದಿರುವುದು ದೊಡ್ಡ ಸಮಸ್ಯೆಯಾಗಿದೆ.
ಈ ಕುರಿತು ಈರುಳ್ಳಿ ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಉತ್ತಂಗಿ ಮಾತನಾಡಿ, “ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈರುಳ್ಳಿ ಬೆಳೆಗಾರರ ಸಂಕಷ್ಟದತ್ತ ತಕ್ಷಣ ಗಮನ ಹರಿಸಬೇಕು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ಭದ್ರತೆ ಒದಗಿಸಬೇಕು. ಇಲ್ಲವಾದರೆ ರೈತರು ನಷ್ಟದಿಂದ ಹೊರಬರಲು 2–3 ವರ್ಷ ಬೇಕಾಗಬಹುದು,” ಎಂದು ಆಗ್ರಹಿಸಿದರು.
ಸತತ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ಸ್ಥಿತಿ ಗಂಭೀರವಾಗಿದೆ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ರೈತರ ನೆರವಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಈರುಳ್ಳಿ ಬೆಳೆಗಾರರು ಒತ್ತಾಯಿಸಿದ್ದಾರೆ.

























