
ಲಂಡನ್:ಜು13:ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ಭೀಕರ ಹವಾಮಾನ ವೈಪರೀತ್ಯಕ್ಕೆ ಬ್ರಿಟನ್ ತತ್ತರಿಸಿ ಹೋಗಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿ ಉಂಟಾದ ಅತಿಯಾದ ಉಷ್ಣ ಅಲೆಗಳಿಗೆ ಬರೋಬ್ಬರಿ 2,700ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಅಂದಾಜು ಹೊರಬಿದ್ದಿದೆ.
ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್, ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಹವಾಮಾನ ಇಲಾಖೆ ಜಂಟಿಯಾಗಿ ನಡೆಸಿರುವ ಅಧ್ಯಯನದಿಂದ ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನ ದಾಖಲಾದ ಕಾರಣ ಇಷ್ಟೊಂದು ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ವರದಿಗಳ ಪ್ರಕಾರ, ಇಂಗ್ಲೆಂಡ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಶಾಖ ಹೊಂದಿದ್ದ ಜೂನ್ ತಿಂಗಳು ಇದಾಗಿದೆ. ನಾಫೆರ್Çೀಕ್‍ನ ಲಿಂಗ್‍ವುಡ್‍ನಲ್ಲಿ ತಾಪಮಾನವು ಬರೋಬ್ಬರಿ 37.7 ಡಿಗ್ರಿ ಸೆಲ್ಸಿಯಸ್‍ಗೆ (99.9ಈ) ತಲುಪುವ ಮೂಲಕ 1957ರಲ್ಲಿದ್ದ 35.6 ಡಿಗ್ರಿ ಸೆಲ್ಸಿಯಸ್ ದಾಖಲೆಯನ್ನು ಧೂಳೀಪಟ ಮಾಡಿದೆ. ಅದೇ ರೀತಿ, ಮೇ 26ರಂದು ಕ್ಯೂ ಗಾರ್ಡನ್ಸ್‍ನಲ್ಲಿ 35.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು 1922ರ ದಾಖಲೆಯನ್ನು ಮುರಿದಿದೆ. ಹವಾಮಾನದ ತೀವ್ರತೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಭಾಗಗಳಲ್ಲಿ ಮೊದಲ ಬಾರಿಗೆ ಅಪರೂಪದ ರೆಡ್ ಹೀಟ್ ಅಲರ್ಟ್ (ಕೆಂಪು ಎಚ್ಚರಿಕೆ) ಘೋಷಿಸಲಾಗಿತ್ತು.
ಬ್ರಿಟನ್‍ನಲ್ಲಿ ತಾಪಮಾನ ದಿಢೀರನೆ ಏರಲು ಹೀಟ್ ಡೋಮ್ ಎಂಬ ಹವಾಮಾನ ವಿದ್ಯಮಾನ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ವಾತಾವರಣದಲ್ಲಿ ಹೆಚ್ಚಿನ ಒತ್ತಡದ ವಲಯವೊಂದು ಸೃಷ್ಟಿಯಾಗಿ, ಅದು ಬಿಸಿ ಗಾಳಿಯನ್ನು ಒಂದೇ ಕಡೆ ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಮಾನವ ನಿರ್ಮಿತ ಹವಾಮಾನ ಬದಲಾವಣೆಯಿಂದಾಗಿ ಜಾಗತಿಕ ತಾಪಮಾನ 1.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಇದು ಬ್ರಿಟನ್‍ನ ಗರಿಷ್ಠ ತಾಪಮಾನಕ್ಕೆ ಹೆಚ್ಚುವರಿಯಾಗಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಸೇರಿಸಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‍ನ ಬಹುತೇಕ ಮನೆಗಳನ್ನು ಚಳಿಗಾಲಕ್ಕೆ ತಕ್ಕಂತೆ, ಅಂದರೆ ಶಾಖವನ್ನು ಒಳಗೇ ಹಿಡಿದಿಟ್ಟುಕೊಳ್ಳುವ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಆದರೆ, ಪ್ರಸ್ತುತ ಉಂಟಾಗಿರುವ ಉಷ್ಣ ಅಲೆಯನ್ನು ತಡೆದುಕೊಳ್ಳುವ ಶಕ್ತಿ ಈ ಮನೆಗಳಿಗಿಲ್ಲ. ತಾಪಮಾನ ಹೆಚ್ಚಾದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತ ಹಾಗೂ ಸ್ಟ್ರೋಕ್‍ನಂತಹ ಮಾರಣಾಂತಿಕ ಪರಿಸ್ಥಿತಿಗೆ ಕಾರಣವಾಗುತ್ತದೆ.
ಬಿಸಿಲಿನ ಧಗೆಯು ದೇಹವನ್ನು ಸದ್ದಿಲ್ಲದೆ ಕೊಲ್ಲುವ ಸೈಲೆಂಟ್ ಕಿಲ್ಲರ್ ಆಗಿದೆ. ಹವಾಮಾನ ತಜ್ಞರು ನೀಡಿರುವ ಎಚ್ಚರಿಕೆ ಕೋಷ್ಟಕ ಲಘು ಬಿಸಿಲಿನ ಬೇಗೆಯಿಂದ ತಲೆತಿರುಗುವಿಕೆ, ಅತಿಯಾದ ಬೆವರುವಿಕೆ, ಚರ್ಮ ತಣ್ಣಗಾಗುವುದು, ವಾಕರಿಕೆ ಹಾಗೂ ಮಾಂಸಖಂಡಗಳ ಸೆಳೆತ.ಬಿಸಿಲಾಘಾತ ಅಥವಾ ಹೀಟ್ ಸ್ಟ್ರೋಕ್ ಗೊಂದಲದ ವಾತಾವರಣ, ಬೆವರುವಿಕೆ ನಿಲ್ಲುವುದು, ದೇಹದ ತಾಪಮಾನ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗುವುದು, ಒಣ ಚರ್ಮ, ಮೂರ್ಛೆ ಹೋಗುವುದು ಅಥವಾ ಫಿಟ್ಸ್ ಬರುವುದು.
ಪ್ರಸ್ತುತ ಬಿಡುಗಡೆ ಮಾಡಲಾಗಿರುವ ಸಾವಿನ ಸಂಖ್ಯೆಯು ಕೇವಲ ಒಂದು ಅಂದಾಜಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ನೈಜ ಸಾವಿನ ಸಂಖ್ಯೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಲ್ಲದೇ ಇರಬಹುದು ಎಂದು ಸಂಶೋಧಕರಾದ ಡಾ. ಕ್ಲೇರ್ ಬಾನ್ರ್ಸ್ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಜಾಗತಿಕವಾಗಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಗಟ್ಟದಿದ್ದರೆ, ಮುಂಬರುವ ದಶಕಗಳಲ್ಲಿ ಉತ್ತರ ಯುರೋಪ್ ಭಾಗದಲ್ಲಿ ಚಳಿಗಾಲದ ಸಾವುಗಳಿಗಿಂತ ಬೇಸಿಗೆಯ ಬಿಸಿಲಿನಿಂದ ಸಾಯುವವರ ಸಂಖ್ಯೆಯೇ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.






























