
ಸಂಜೆವಾಣಿ ನ್ಯೂಸ್
ಚಾಮರಾಜನಗರ, ಜೂ.07:– ನಮ್ಮ ಸುತ್ತಮುತ್ತಲಿನಲ್ಲಿ ಉತ್ತಮ ಪರಿಸರ ಹಾಗು ಮರ ಗಿಡಗಳನ್ನು ಬೆಳೆಸಿದ್ದರೆ ಶುದ್ದ ಗಾಳಿ ಸಿಗುತ್ತದೆ.ಇದರಿಂದ ಆರೋಗ್ಯವಂತ ಜೀವನ ಮಾಡಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಣೆ ಮಾಡಿ, ಮುಂದಿನ ಪೀಳಿಗೆಗೆ ಹಸಿರಿನ ಪರಿಸರವನ್ನು ನೀಡೋಣ ಎಂದು ಚಾ.ನಗರ ಅರಣ್ಯ ಇಲಾಖೆಯ ಉಪ ವಲಯ ಅರಣಾಧಿಕಾರಿ ಆರ್. ಚಂದ್ರ ಕುಮಾರ್ ತಿಳಿಸಿದರು.
ನಗರದ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾ ಸಂಸ್ಥೆಯ ಅವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯವಾಗಬೇಕು. ಉತ್ತಮವಾದ ಪರಿಸರ ಇರುವುದರಿಂದ ನಮಗೆ ಒಳ್ಳೆಯ ಗಾಳಿ ಮತ್ತು ವಾತಾವರಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಹಾಗಾಗಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕು. ವಿದ್ಯಾರ್ಥಿ ದಿಸೆಯಿಂದ ಗಿಡಗಳನ್ನು ಸಂರಕ್ಷಣೆ ಮಾಡುವ ಮತ್ತು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಪರಿಪಾಠ ಬೆಳೆಸಿಕೊಂಡು ನಮ್ಮ ಸುತ್ತಮುತ್ತಲಿನ ಹಸಿರಿನ ವಾತಾವರಣ ನಿರ್ಮಾಣವಾಗುತ್ತದೆ. ಶುದ್ದವಾದ ಗಾಳಿ ಬೆಳಕು, ನೀರು ದೊರೆಯುತ್ತದೆ ಎಂದರು.
ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡು ಬೆಳೆದಂತೆ ಕಾಡು ನಾಶವಾಗುತ್ತದೆ. ಕಾಡು ನಾಶವಾದರೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೆಟ್ಟ ಗುಡ್ಡಗಳನ್ನು ಹೊಡೆದು ಕೈಗಾರಿಕರಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಿಡ ಮರಗಳನ್ನು ನಾಶ ಮಾಡುವುದರಿಂದ ಮಳೆ ಇಲ್ಲದಂತಾಗುತ್ತದೆ. ಪರಿಸರ ನಾಶವಾಗಿ, ನಾವು ವಾಸಿಸುವ ಪ್ರದೇಶದಲ್ಲಿ ಉತ್ತಮ ಗಾಳಿ ಯೇ ಇಲ್ಲದಂತಾಗುತ್ತದೆ. ನಮ್ಮ ಪೂರ್ವವಿಕರು ಊರುಮುಂದೆ ಒಂದು ಕೆರೆ, ಸುತ್ತಲು ಮರ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಿದ್ದರು. ಇತರರೊಟ್ಟಿಗೆ ಅರಳಿಮರ, ಮೇವಿನ ಮರ, ಹೊಂಗೆ ಗಿಡಗಳನ್ನು ಹಾಕಿ ಉತ್ತಮ ಗಾಳಿ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಯಾವುದೇ ರೀತಿಯ ಖಾಯಿಲೆ ಇಲ್ಲದೇ ನೂರು ವರ್ಷಗಳ ಬದುಕುತ್ತಿದ್ದರು. ಈಗ ಇದೆಲ್ಲವು ಹೋಗಿ ನಮ್ಮ ಪರಿಸರವೇ ಮಾರಕವಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಕೆಲಸವನ್ನು ನಾವೆಲ್ಲ ಸೇರಿ ಮಾಡೋಣ ಎಂದರು.
ನಮ್ಮ ಸಂಸ್ಥೆಯಲ್ಲಿರುವ ಸಾವಿರ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡವನ್ನು ನೆಟ್ಟರೆ ಪ್ರತಿ ವರ್ಷಕ್ಕೂ ಒಂದು ಸಾವಿರ ಗಿಡವನ್ನು ನಾವು ಬೆಳೆಸಬಹುದು ಎಂಬ ಮಾಹಿತಿಯನ್ನು ನೀಡಿದರು. ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯÀಕ್ಷತೆಯನ್ನು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಯೂ ಆದ ವಕೀಲ ಕೆ.ಎಂ. ಮಲ್ಲಿಕಾರ್ಜುನಪ್ಪ ವಹಿಸಿದ್ದರು. ಶ್ರೀ ಮುರುಘರಾಜೇಂದ್ರಸ್ವಾಮಿ ಕಾಲೇಜಿನ ಪ್ರಾಂಶುಪಾಲರಾದ ಮಹದೇವಸ್ವಾಮಿ ಪಿ, ವಿದ್ಯಾಸಂಸ್ಥೆಯ ಎಲ್ಲಾ ಶಾಲೆಯ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.





























