Home ಸುದ್ದಿ ರಾಷ್ಟ್ರೀಯ ಥಿಯೇಟರ್ ಕಮಾಂಡ್ ರಚನೆ ಒಪ್ಪಿಗೆ ಕೋರಿ ಶೀಘ್ರ ರಾಜನಾಥ್‍ಗೆ ಮಾಹಿತಿ

ಥಿಯೇಟರ್ ಕಮಾಂಡ್ ರಚನೆ ಒಪ್ಪಿಗೆ ಕೋರಿ ಶೀಘ್ರ ರಾಜನಾಥ್‍ಗೆ ಮಾಹಿತಿ

ನವದೆಹಲಿ,ಜು.13:ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹತ್ತರ ಸುಧಾರಣೆ ತರಬಲ್ಲ ಮಿಲಿಟರಿ ಥಿಯೇಟರ್ ಕಮಾಂಡ್ (ಸಂಯೋಜಿತ ಕಮಾಂಡ್) ಯೋಜನೆಗೆ ವೇಗ ನೀಡಲು ನೂತನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಮುಂದಾಗಿದ್ದಾರೆ.
ಈ ತಿಂಗಳ ಅಂತ್ಯದೊಳಗೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ, ಈ ಯೋಜನೆಯ ಮುಂದಿನ ಹಾದಿಯ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವರಿಂದ ಹಸಿರು ನಿಶಾನೆ ಸಿಕ್ಕ ತಕ್ಷಣ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಭದ್ರತಾ ಸಮಿತಿ ಯಂತಿಮ ಅನುಮೋದನೆಗಾಗಿ ಈ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ. 2022 ರಿಂದಲೂ ಈ ಮಹತ್ವಾಕಾಂಕ್ಷೆಯ ಯೋಜನೆಯ ಕೆಲಸಗಳು ಪ್ರಗತಿಯಲ್ಲಿವೆ.

ಸದ್ಯ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳು ಪ್ರತ್ಯೇಕ ಕಮಾಂಡ್‍ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊಸ ಯೋಜನೆಯಡಿ ಇವೆಲ್ಲವನ್ನೂ ಒಗ್ಗೂಡಿಸಿ ಪ್ರಮುಖವಾಗಿ ಮೂರು ಥಿಯೇಟರ್ ಕಮಾಂಡ್‍ಗಳನ್ನು ರಚಿಸಲಾಗುತ್ತದೆ:

ಉತ್ತರ ಕಮಾಂಡ್ ಚೀನಾ ಗಡಿಗೆ ಸಂಬಂಧಿಸಿದ್ದು.ಪಶ್ಚಿಮ ಕಮಾಂಡ್: ಪಾಕಿಸ್ತಾನ ಗಡಿಗೆ ಸಂಬಂಧಿಸಿದ್ದು.ಕಡಲ ಕಮಾಂಡ್ (ಮಾರಿಟೈಮ್): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕಮಾಂಡ್ ಸೇರಿದಂತೆ ಕರಾವಳಿ ಭದ್ರತೆಗೆ ಸಂಬಂಧಿಸಿದ್ದಾಗಿದೆ.
ಯೋಜನೆಯ ಭಾಗವಾಗಿ ನಾಲ್ಕು ಹೊಸ ಫೆÇೀರ್ ಸ್ಟಾರ್ ಅಧಿಕಾರಿಗಳ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಇದರಲ್ಲಿ ವೈಸ್ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯೂ ಸೇರಿದೆ. ಪ್ರತಿಯೊಂದು ಥಿಯೇಟರ್ ಕಮಾಂಡ್‍ಗೂ ಹಾಲಿ ಇರುವ ಸೇನಾ ಮುಖ್ಯಸ್ಥರ ಶ್ರೇಣಿಯ ಫೆÇೀರ್ ಸ್ಟಾರ್ ಅಧಿಕಾರಿಯೇ ಮುಖ್ಯಸ್ಥರಾಗಿರುತ್ತಾರೆ.

ರಾಜಕೀಯ ನಾಯಕತ್ವವು ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದ್ದರೂ, ಮೂರೂ ಸೇನಾ ಪ್ರಧಾನ ಕಚೇರಿಗಳಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿವೆ. ಹೊಸ ವ್ಯವಸ್ಥೆಯಲ್ಲಿ ಸೇನಾ ಮುಖ್ಯಸ್ಥರ ಕಾರ್ಯಾಚರಣೆಯ ಅಧಿಕಾರಗಳು ಮೊಟಕಾಗಲಿವೆ. ಯುದ್ಧದ ಸಮಯದಲ್ಲಿ ಥಿಯೇಟರ್ ಕಮಾಂಡರ್‍ಗಳು ನೇರವಾಗಿ ರಕ್ಷಣಾ ಸಚಿವರಿಂದಲೇ ಆದೇಶಗಳನ್ನು ಪಡೆಯಲಿದ್ದಾರೆ. ಸೇನಾ ಮುಖ್ಯಸ್ಥರ ಜವಾಬ್ದಾರಿ ಕೇವಲ ತರಬೇತಿ ಮತ್ತು ಸೈನಿಕರ ನಿರ್ವಹಣೆಗೆ ಮಾತ್ರ ಸೀಮಿತವಾಗಲಿದೆ.
ವಾಯುಸೇನೆಯು ತನ್ನಲ್ಲಿರುವ ಸೀಮಿತ ವಾಯು ಸಂಪನ್ಮೂಲಗಳನ್ನು ಬೇರೆ ಬೇರೆ ಕಮಾಂಡ್‍ಗಳಿಗೆ ಹಂಚಿಕೆ ಮಾಡುವುದರಿಂದ ಒಟ್ಟಾರೆ ಸಾಮಥ್ರ್ಯಕ್ಕೆ ಧಕ್ಕೆಯಾಗಬಹುದು ಎಂಬ ಕಳಕಳಿಯನ್ನು ವ್ಯಕ್ತಪಡಿಸಿದೆ ಎನ್ನಲಾಗಿದೆ.

ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಎರಡನೇ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರು ಈ ಯೋಜನೆಗೆ ಗಟ್ಟಿ ಮುನ್ನುಡಿ ಬರೆದಿದ್ದು, ಈಗ ಅದನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ನೂತನ ಸಿಡಿಎಸ್ ಜನರಲ್ ಸುಬ್ರಮಣಿ ಹೆಗಲಿಗೇರಿದೆ.