ಜಿಎಸ್‌ಟಿ ಕಡಿತ ಕೇಂದ್ರದ ಕ್ರಮ ಸ್ವಾಗತಾರ್ಹ : ಕೆಎನ್‌ಆರ್ಕಡಿತವಾಗುವ ರಾಜ್ಯ ಸರ್ಕಾರಗಳ ಜಿಎಸ್‌ಟಿ ಪಾಲಿನ ಹಣ ನೀಡಲು ಒತ್ತಾಯ


ತುಮಕೂರು, ಸೆ. ೪- ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ ಇದರಿಂದ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ರಾಜ್ಯ ಸರ್ಕಾರಗಳು ಆರ್ಥಿಕ ಮುಗ್ಗಟ್ಟಿಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಸರ್ಕಾರಗಳಿಗೆ ಕಡಿಮೆಯಾಗುವ ಹಣವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಇಂದಿಲ್ಲಿ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಶೇ. ೨೮ ಇದ್ದ ಜಿಎಸ್‌ಟಿಯನ್ನು ಶೇ ೧೮ಕ್ಕೆ, ಹಾಗೆಯೇ ಶೇ. ೧೮ ರಿಂದ ಶೇ. ೫ಕ್ಕೆ ಜಿಎಸ್‌ಟಿಯನ್ನು ಇಳಿಕೆ ಮಾಡಿದೆ. ಇದು ಜನಸಾಮಾನ್ಯರ ಹಿತದೃಷ್ಠಿಯಿಂದ ಒಳ್ಳೆಯದು ಹಾಗಾಗಿ ನಾನು ಸ್ವಾಗತ ಮಾಡುತ್ತೇನೆ. ಆದರೆ ಜಿಎಸ್‌ಟಿ ಕಡಿಮೆ ಮಾಡಿರುವುದರಿಂದ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿ ಪಾಲು ಕಡಿಮೆಯಾಗುತ್ತದೆ. ಇದರಿಂದ ರಾಜ್ಯ ಸರ್ಕಾರಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಸಾಧ್ಯತೆಯಿದೆ. ಹಾಗಾಗಿ ಕೇಂದ್ರ ಸರ್ಕಾರ ಜಿಎಸ್‌ಟಿ ಪಾಲಿನಲ್ಲಿ ಕಡಿಮೆಯಾಗುವ ಹಣವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೈತರ ೫೦ ಸಾವಿರ ಹಾಗೂ ೧ ಲಕ್ಷ ರೂ. ವರೆಗಿನ ಸಾಲನ್ನು ಮನ್ನಾ ಮಾಡಲಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು ೪೪ ಸಾವಿರ ರೈತರ ೧ ಲಕ್ಷ ರೂ.ನಂತೆ ೨೫೨ ಕೋಟಿ ರೂ. ಸಾಲ ಮನ್ನಾ ಮಾಡಲಾಗಿತ್ತು. ಇನ್ನು ಅನೇಕ ರೈತರ ಖಾತೆಗಳಿಗೆ ಸಾಲ ಮನ್ನಾದ ಹಣ ಜಮಾ ಆಗಿಲ್ಲ. ಕೂಡಲೇ ಈ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಅಭಿನಂದನೆ
ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಮುಂದಿನ ೫ ವರ್ಷಗಳ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷರಾಗಿ, ಉಪಾಧ್ಯಕ್ಷರನ್ನಾಗಿ ಜಿ.ಜೆ. ರಾಜಣ್ಣರವರನ್ನು ಆಡಳಿತ ಮಂಡಳಿಯ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ಮುಂದಿನ ೫ ವರ್ಷಗಳ ಅವಧಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜವಾಬ್ದಾರಿಯನ್ನು ನಿರ್ವಹಿಸುವ ಅಧಿಕಾರವನ್ನು ನನಗೆ ನೀಡಿದ್ದಾರೆ ಎಂದ ಅವರು, ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಬ್ಯಾಂಕ್‌ನ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ರೈತರಿಗೆ ಸ್ವಾಭಿಮಾನ ಬದುಕು
ಬ್ಯಾಂಕ್ ಧ್ಯೇಯ
ನಮ್ಮ ಜಿಲ್ಲೆಯ ರೈತಾಪಿ ಜನರು, ಧ್ವನಿ ಇಲ್ಲದ ಜನರಿಗೆ ಹಣಕಾಸಿನ ಸಾಲ ಸೌಲಭ್ಯವನ್ನು ಕೊಟ್ಟು ಅವರು ಕೂಡಾ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಎಲ್ಲಿಯವರೆಗೆ ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗುವುದಿಲ್ಲವೋ ಅಲ್ಲಿಯವರೆಗೆ ದೇಶವೂ ಕೂಡ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.
ಹಳ್ಳಿಗಾಡಿನ ಜನರು ಆರ್ಥಿಕ ಪ್ರಗತಿ ಹೊಂದಿದರೆ ನಮ್ಮ ದೇಶದ ಜಿಡಿಪಿಯೂ ಹೆಚ್ಚಾಗುತ್ತದೆ. ಹಾಗಾಗಿ ಹಳ್ಳಿಗಾಡಿನ ಜನರು ಆರ್ಥಿಕವಾಗಿ ಸದೃಢರಾಗುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಅಗತ್ಯ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ರೈತರಿಗೆ ಹೊಸ ಬೆಳೆ ಬೆಳೆಯಲು ಬ್ಯಾಂಕ್ ವತಿಯಿಂದ ಉತ್ತೇಜನ ನೀಡಲಾಗುವುದು. ಈಗಾಗಲೇ ತೆಂಗಿಗೆ ಕಾಂಡ ಸೋರುವ ರೋಗ, ಕಾಂಡ ಕೊರೆಯುವ ರೋಗ, ನುಸಿ ಪೀಡೆ ಸೇರಿದಂತೆ ಅನೇಕ ರೋಗಗಳು ಬಾಧಿಸುತ್ತಿವೆ. ಈ ರೋಗಗಳಿಗೆ ತುತ್ತಾಗಿ ತೆಂಗಿನ ಮರಗಳು ಒಣಗುತ್ತವೆ.
ಇರುವ ಮರಗಳಲ್ಲಿ ಫಸಲು ಬರುತ್ತಿಲ್ಲ. ಹಾಗಾಗಿ ರೈತರು ತಮ್ಮ ಬೇಸಾಯದ ಕಸುಬಿನ ಜತೆಗೆ ಉಪಕಸುಬು ಮಾಡಲು ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.