ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಗೆದ್ದ ಔಸ್ಮಾನೆ ಡೆಂಬೆಲೆ

ಪ್ಯಾರಿಸ್,ಸೆ.೨೩- ಕಳೆದ ಋತುವಿನಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫ್ರಾನ್ಸ್‌ನ ಫಾರ್ವರ್ಡ್ ಆಟಗಾರ ಔಸ್ಮಾನೆ ಡೆಂಬೆಲೆ ಫುಟ್‌ಬಾಲ್‌ನ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಪ್ರಶಸ್ತಿಯಾದ ಬ್ಯಾಲನ್ ಡಿ’ಓರ್ ಗೆದ್ದಿದ್ದಾರೆ.


೨೮ ವರ್ಷದ ಡೆಂಬೆಲೆ ಅವರು ಬಾರ್ಸಿಲೋನಾದ ಯುವ ಆಟಗಾರ ಲ್ಯಾಮಿನ್ ಯ್ಮಲ್ ಮತ್ತು ಪಿಎಸ್‌ಜಿ ಮಿಡ್‌ಫೀಲ್ಡರ್ ವಿಟಿನ್ಹಾ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗಾಗಿ ಓಟದಲ್ಲಿ ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


ಪ್ಯಾರಿಸ್‌ನ ಥಿಯೇಟ್ರೆ ಡು ಚಾಟೆಲೆಟ್‌ನಲ್ಲಿ ನಡೆದ ೬೯ ನೇ ಬ್ಯಾಲನ್ ಡಿ’ಓರ್ ಪ್ರಶಸ್ತಿಗಳಿಗೆ ಇಡೀ ಫುಟ್‌ಬಾಲ್ ಜಗತ್ತು ಸಾಕ್ಷಿಯಾಯಿತು. ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ಸ್ಟಾರ್ ವಿಂಗರ್ ಔಸ್ಮಾನೆ ಡೆಂಬೆಲೆ ತಮ್ಮ ವೃತ್ತಿಜೀವನದ ಮೊದಲ ಬ್ಯಾಲನ್ ಡಿ’ಓರ್ ಗೆಲ್ಲುವ ಮೂಲಕ ಫ್ರಾನ್ಸ್‌ಗೆ ಹೆಮ್ಮೆ ತಂದಿದ್ದಾರೆ.


ಬ್ಯಾಲನ್ ಡಿ’ಓರ್ ಫುಟ್ಬಾಲ್ ಜಗತ್ತಿನಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಇದನ್ನು ವಾರ್ಷಿಕವಾಗಿ ವಿಶ್ವದ ಅತ್ಯುತ್ತಮ ಆಟಗಾರನಿಗೆ ನೀಡಲಾಗುತ್ತದೆ. ಈ ಗೌರವವು ವೈಯಕ್ತಿಕ ಕೌಶಲ್ಯ ಮತ್ತು ಪ್ರದರ್ಶನವನ್ನು ಮಾತ್ರವಲ್ಲದೆ, ಆಟಗಾರನು ತನ್ನ ಕ್ಲಬ್ ಮತ್ತು ರಾಷ್ಟ್ರೀಯ ತಂಡಕ್ಕೆ ನೀಡಿದ ಕೊಡುಗೆಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈ ಹಿಂದೆ ಬೊರುಸ್ಸಿಯಾ ಡಾರ್ಟ್ಮಂಡ್ ಮತ್ತು ಬಾರ್ಸಿಲೋನಾ ಪರ ಆಡಿರುವ ಡೆಂಬೆಲೆ, ೨೦೧೮ ರಲ್ಲಿ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡದ ಭಾಗವಾಗಿದ್ದಾರೆ.

ಕಳೆದ ಋತುವಿನಲ್ಲಿ, ಅವರು ಎಲ್ಲಾ ಸ್ಪರ್ಧೆಗಳಲ್ಲಿ ಒಟ್ಟು ೩೫ ಗೋಲುಗಳನ್ನು ಗಳಿಸಿದ್ದಾರೆ ಮತ್ತು ಕ್ಲಬ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಿಎಸ್‌ಜಿ ಚಾಂಪಿಯನ್ಸ್ ಲೀಗ್ ಹಾಗೂ ಫ್ರೆಂಚ್ ಲೀಗ್ ಮತ್ತು ಕಪ್ ಡಬಲ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಟ್ರೋಫಿಯನ್ನು ಎತ್ತುವಾಗ ಡೆಂಬೆಲೆ ಅವರ ಮುಖದಲ್ಲಿ ಸಂತಸದ ಭಾವನೆಗಳು ಸ್ಪಷ್ಟವಾಗಿದ್ದವು.
ಪ್ರಶಸ್ತಿ ಗೆದ್ದ ನಂತರ ಭಾವುಕರಾದ ಡೆಂಬೆಲೆ, ನನಗೆ ನಿಜವಾಗಿಯೂ ಮಾತುಗಳೇ ಬರುತ್ತಿಲ್ಲ. ಪಿಎಸ್‌ಜಿ ಜೊತೆಗಿನ ಈ ಋತು ಅದ್ಭುತವಾಗಿತ್ತು. ಇದು ವೈಯಕ್ತಿಕ ಟ್ರೋಫಿ, ಆದರೆ ವಾಸ್ತವವಾಗಿ ಇಡೀ ತಂಡವೇ ಗೆದ್ದಿದೆ. ಬ್ಯಾಲನ್ ಡಿ’ಓರ್ ಎಂದಿಗೂ ನನ್ನ ವೃತ್ತಿಜೀವನದ ಗುರಿಯಾಗಿರಲಿಲ್ಲ, ಆದರೆ ಚಾಂಪಿಯನ್ಸ್ ಲೀಗ್ ಗೆಲ್ಲಲು ನಾನು ಶ್ರಮಿಸಿದೆ ಎಂದು ಹೇಳಿದ್ದಾರೆ.


ಡೆಂಬೆಲೆ ತಮ್ಮ ಕೋಚ್ ಲೂಯಿಸ್ ಎನ್ರಿಕ್ ಅವರಿಗೆ ಧನ್ಯವಾದ ಅರ್ಪಿಸಿ, ಅವರನ್ನು ತಂದೆಯಂತೆ ಎಂದು ಬಣ್ಣಿಸಿದ್ದಾರೆ.
ಮಹಿಳಾ ವಿಭಾಗದಲ್ಲಿ, ಬಾರ್ಸಿಲೋನಾ ಮಿಡ್‌ಫೀಲ್ಡರ್ ಐತಾನಾ ಬೊನ್ಮಟಿ ಸತತ ಮೂರನೇ ಬಾರಿಗೆ ಬ್ಯಾಲನ್ ಡಿ’ಓರ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ೨೬ ವರ್ಷದ ಸ್ಪ್ಯಾನಿಷ್ ತಾರೆ ತಮ್ಮ ಸ್ಥಿರ ಪ್ರದರ್ಶನದೊಂದಿಗೆ ಮಹಿಳಾ ಫುಟ್‌ಬಾಲ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ.