Home ಜಿಲ್ಲೆ ವರ್ತಮಾನವನ್ನು ನಿರ್ವಹಣೆ ಮಾಡುವುದೇ ಭವಿಷ್ಯ :  ಬಸವಲಿಂಗ ಸ್ವಾಮಿಗಳು

ವರ್ತಮಾನವನ್ನು ನಿರ್ವಹಣೆ ಮಾಡುವುದೇ ಭವಿಷ್ಯ :  ಬಸವಲಿಂಗ ಸ್ವಾಮಿಗಳು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ. 19: ವರ್ತಮಾನವನ್ನು ಸರಿಯಾಗಿ ನಿರ್ವಹಣೆ ಮಾಡುವುದೇ ಉತ್ತಮವಾದ ಭವಿಷ್ಯ ನಿರ್ಮಾಣಕ್ಕೆ ಅನುಕೂಲವಾಗಲಿದೆಂದು  ಕೊಟ್ಟೂರು ಸಂಸ್ಥಾನ ಮಠದ   ಬಸವಲಿಂಗ ಸ್ವಾಮಿಗಳು ಹೇಳಿದ್ದಾರೆ.

ನಗರದಲ್ಲಿನ  ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಿನ್ನೆ  ನಡೆದ ಶಿವಾನುಭವ ಸಂಪದದಲ್ಲಿ ಆಶೀರ್ವಾದ ಮಾಡಿದ ಶ್ರೀಗಳು, ವರ್ತಮಾನವನ್ನು ಆಧರಿಸಿ ಭವಿಷ್ಯ ನಿರ್ಮಾಣ ಆಗಲಿದೆ. ಅಂದರೆ, ವರ್ತಮಾನದಲ್ಲಿ ಸತ್ಯ, ಧರ್ಮ, ಅಹಿಂಸೆ, ನೀತಿ ಮತ್ತು ಆಚಾರ – ವಿಚಾರಗಳನ್ನು ಪಾಲಿಸಿದಲ್ಲಿ ಉತ್ತಮವಾದ ಭವಿಷ್ಯ ಸಹಜವಾಗಿಯೇ ರೂಪುಗೊಳ್ಳಲಿದೆ ಎಂದರು.

ಗುತ್ತಿಗೆದಾರ ಎಂ. ಚಂದ್ರಶೇಖರಗೌಡ ಮಾತನಾಡಿ `ಧರ್ಮೋ ರಕ್ಷತಿ ರಕ್ಷಿತಃ’ ವಿಷಯದ ಉಪನ್ಯಾಸ ನೀಡಿ, ದೇಶ – ಕಾಲವನ್ನು ಮೀರಿದ್ದು ಧರ್ಮ. ಧಾರಣ ಮತ್ತು ಪೋಷಣದ ಆಚರಣೆಯೇ ಧರ್ಮ. ಧರ್ಮವನ್ನು ಬಿತ್ತಿದಾಗಲೇ ಧರ್ಮದ ಫಲ ಸಿಗುತ್ತದೆ. ಧರ್ಮ ಪದಕ್ಕೆ ವಿಶಾಲಾರ್ಥವಿದೆ. ಧರ್ಮದ ವ್ಯಾಪ್ತಿಯು ಅಗಣಿತವಾಗಿದೆ. ಇಹ – ಪರದ ಚಿಂತನೆಗಳ ತಿರುಳು ಧರ್ಮವಾಗಿದೆ ಎಂದರು.

ಭಾರತೀಯ ರೆಡ್ಕ್ರಾಸ್ನ ಬಳ್ಳಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಎ. ಷಕೀಬ್ ಮಾತನಾಡಿ, ನಿಸ್ವಾರ್ಥ ಸೇವೆಯು ಆತ್ಮತೃಪ್ತಿಯನ್ನು ನೀಡುತ್ತದೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವುದೂ ಧರ್ಮದ ಪಾಲನೆ ಮಾಡಿದಂತೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಪ್ರಾಥಮಿಕ ಚಿಕಿತ್ಸೆ ಮತ್ತು ಸಿಪಿಆರ್ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ – ಆಸಕ್ತಿಗೆ ಉಚಿತವಾಗಿ ನೀಡುತ್ತಿದೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದರು.

ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ಲು ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಉಪನ್ಯಾಸಕರಾದ ಟಿ. ಹೇಮಂತ್ ಕುಮಾರ್ ಅವರು, ಆಧ್ಯಾತ್ಮವಿಲ್ಲದ ವಿದ್ಯೆ, ರಾಮನಿಲ್ಲದ ಅಯೋಧ್ಯೆ ಇದ್ದಂತೆ. ಕಾರಣ ಪ್ರತಿಯೊಬ್ಬರೂ ವಿದ್ಯೆಯ ಜೊತೆಯಲ್ಲಿ ಆಧ್ಯಾತ್ಮ, ಮಾನವೀಯತೆ, ಧರ್ಮಪಾಲನೆಗೆ ಹೆಚ್ಚಿನ ಗಮನ ನೀಡಬೇಕೆಂದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರಜ್ಞಾ ಕೆ.ವಿ. ಅವರು, ಮಹಿಳಾ ಆತ್ಮಾಭಿಮಾನದ ಸಂಕೇತವೇ ಅಕ್ಕಮಹಾದೇವಿ. ಮಹಿಳಾ ಸ್ವಾತಂತ್ರ್ಯ, ಭಕ್ತಿ, ಶ್ರದ್ಧೆ, ಅಂತಃಕರಣಗಳನ್ನು ಅಳವಡಿಸಿಕೊಂಡು ಸಾಧನಾ ಮಾರ್ಗದತ್ತ ಹೆಜ್ಜೆ ಹಾಕಿ ಅನೇಕರಿಗೆ ಆದರ್ಶವಾಗಿದ್ದಾರೆಂದರು.

ಅಕ್ಕನ ಬಳಗದ ಸುರೇಖಾ ಮಲ್ಲನಗೌಡ ಮತ್ತು ಕೆ. ಪಾರ್ವತಿ ಅವರು ಪ್ರಾರ್ಥನೆ ಸಲ್ಲಿಸಿದರು. ಅಕ್ಕನ ಬಳಗದ ಎಚ್.ಎಂ. ಶಕುಂತಲ ಅವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಕೆ. ಮನಸ್ವಿ ಅವರು ವಂದನಾರ್ಪಣೆ ಸಲ್ಲಿಸಿದರು.