Home ಜಿಲ್ಲೆ ಮೇ 24 ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚಿಂತನೆಯ ಸಮಾವೇಶ

ಮೇ 24 ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚಿಂತನೆಯ ಸಮಾವೇಶ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.8: ಕೇಂದ್ರ ಸರ್ಕಾರದಿಂದ ಕಲ್ಯಾಣ ಕರ್ನಾಟಕದಲ್ಲಿ 371(ಜೆ)ಜಾರಿಯಾಗಿ 14 ವರ್ಷಗಳೂ ಕಳೆದರೂ ಸಹ ಈ ಭಾಗದಲ್ಲಿ ಆರೋಗ್ಯ,ಶಿಕ್ಷಣ,ನಿರುದ್ಯೋಗ,ಸಾಮಾಜಿಕ ಮಾನವ ಸಂಪನ್ಮೂಲದಲ್ಲಿ ಯಾವುದೇ ಪ್ರಗತಿಯಾಗದೆ ಈ ಜಿಲ್ಲೆಗಳು ಹಿಂದುಳಿದಿವೆ ಎಂದು ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರಾದ ಎಸ್. ಪನ್ನಾರಾಜ್. ಆರ್. ಮಾಧವರೆಡ್ಡಿ, ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ರಾಘವೇಂದ್ರ ಕುಷ್ಟಗಿ ಹೇಳಿದ್ದಾರೆ.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ.

ಆರೋಗ್ಯ,ಶಿಕ್ಷಣ,ಉದ್ಯೋಗ,ವಸತಿ,ಸಾಮಾಜಿಕ ಸೇರಿದಂತೆ ಮಾನವ ಸಂಪನ್ಮೂಲಗಳ ಪ್ರಗತಿಯಲ್ಲಿ ಇಡೀ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದಿದ್ದುದರಿಂದ ಈ ಜಿಲ್ಲೆಗಳಲ್ಲಿನ ಯುವಸಮುದಾಯಕ್ಕೆ ಉದ್ಯೋಗ,ಶಿಕ್ಷಣ ವಲಯಗಳಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡುವಂತೆ ಹೋರಾಟ ಮಾಡುವ ಮೂಲಕ 371(ಜೆ) ನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತ್ತು. ಹೆಸರಿಗೆ ಕಲ್ಯಾಣ ಕರ್ನಾಟಕ ಆದರೆ ಇಲ್ಲಿ ಕಲ್ಯಾಣವೇ ಆಗಿಲ್ಲ ಎಂದು ಆರೋಪಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಎ) ಸೇರಿದಂತೆ ಹಲವು ವಿಷಯಗಳ ಕುರಿತು ಹೈದ್ರಬಾದ್ ಕರ್ನಾಟಕ ಜನಾಂದೋಲನ ಕೇಂದ್ರದಿಂದ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್ನಲ್ಲಿ ಮೇ.24 ರಂದು ಸಮಾವೇಶ, ದುಂಡುಮೇಜಿನ ಸಭೆ ಹಮ್ಮಿಕೊಂಡಿದೆಂದು ತಿಳಿಸಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಅಸ್ತಿತ್ವಕ್ಕೆ ಬಂದಿದ್ದ ಸಂಜುಡಪ್ಪ ಕಮಿಟಿಯ ವರದಿಯ ಆಧಾರದಲ್ಲಿ ಮಂಜೂರಾದ ಸಾವಿರಾರು ಕೋಟಿ ಹಣ ಭ್ರಷ್ಟರ ಪಾಲಾಗಿ ಹೋಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಭ್ರಷ್ಟ ಅಧಿಕಾರಿಗಳ ಮತ್ತು ದುಷ್ಕ ಗುತ್ತಿಗೆದಾರರ ಎ ಟಿ ಎಂ ಆಗಿ ಕೆಲಸಮಾಡಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಸ್ಥಿತ್ವಕ್ಕೆ ಬಂದು 12ವರ್ಷಗಳು ಗತಿಸಿವೆ. ಸುಮಾರು 16ಸಾವಿರ ಕೋಟಿ ಹಣ ಮಂಜೂರುಮಾಡಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ 2022ರಲ್ಲಿ ಬಂದ ಸಿಎಜಿ( ಮಹಾಲೆಕ್ಕ ಪರಿಶೋಧಕರ) ವರದಿ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 7ಸಾವಿರಕ್ಕೂ ಹೆಚ್ಚು ಕೋಟಿಹಣ ದುರುಪಯೋಗಾವಾಗಿದೆ ಎಂದು ದಾಖಲಿಸಿದೆ. ಕಳೆದ ಅರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರ 5 ಸಾವಿರ ಕೋಟಿಗಳ ಪೈಕಿ ಕೇವಲ 8 ನೂರು ಕೋಟೆಗಳಿಗೆ ಮಾತ್ರ ಕ್ರಿಯಾಯೋಜನೆಯನ್ನು ಸಲ್ಲಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳನ್ನು ಡಬ್ಲೂಎಪಿಸಿಒಎಸ್ ಎಂಬ ಕೇಂದ್ರ ಸರ್ಕಾರದ ಮೂಲಕ ಇನ್ನೆಕ್ಷನ್ ಮಾಡಿಸಬೇಕೆಂದು ಸರ್ಕಾರದ ಆದೇಶವಿದ್ದರೂ ಕೂಡ ಕೆ ಕೆ ಆರ್ ಡಿ ಬಿ ಕಾರ್ಯದರ್ಶಿ ಈ ಆದೇಶವನ್ನು ಪಾಲನೆ ಮಾಡಿಲ್ಲ.ಇಂತಹ ಹಲವು ಕಾರಂಗಳಿಂದ ಈ ಪ್ರದೇಶದ ಅಭಿವೃದ್ಧಿ ಕುಂಠಿತವಾಗಿದೆಂದರು.ಶಿಕ್ಷರಿಲ್ಲದ ಶಾಲೆಗಳು, ವೈದ್ಯರಿಲ್ಲದ ಆಸ್ಪತ್ರೆಗಳು, ಉದ್ಯೋಗ ದೊರೆಯದೆ ಹತಾಶರಾದ ವಿದ್ಯಾವಂತ ನಿರುದ್ಯೋಗಿಗಳು, ಗುಳೆ ಹೋಗಿ ಬದುಕು ಸಾಗಿಸುತ್ತಿರುವ ಗ್ರಾಮೀಣ ಜನರ ದುಸ್ಥಿತಿ ಇಲ್ಲಿದೆಂದರು.

ಅದಕ್ಕಾಗಿ ಸಾಮಾಜಿಕ ಕಳಕಳಿಯ ಪ್ರಜ್ಞಾವಂತ ನಾಗರಿಕರು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ಪ್ರದೇಶದ ಅಭಿವೃದ್ಧಿಗಾಗಿ ಅನ್ಯಾಯಗಳ ವಿರುದ್ಧ ಅಸಮಾನತೆ ನಿವಾರಣೆಗಾಗಿ ಮತ್ತೊಂದು ದೊಡ್ಡ ಚಳುವಳಿಯ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸಮಾವೇಶ ನಡೆಸಲಿದೆಂದು ಹೇಳಿದರು.