(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.01: ನಗರದ ಕೆಇಬಿ ಸಮುದಾಯ ಭವನದಲ್ಲಿ ನಿನ್ನೆ ನಡೆದ ಜೆಸ್ಕಾಂನ ಹೆಚ್. ಕಂದಾರಪ್ಪ ಹಿರಿಯ ಸಹಾಯಕ, ಡಿ. ಲಕ್ಷ್ಮಿ ದೇವಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಶರ್ಮಾಸ್ ಅಲಿ ಕಿರಿಯ ಸಹಾಯಕರು ಇವರಿಗೆ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಇದರಲ್ಲಿ ಪಾಲ್ಗೊಂಡ ಕೆಇಬಿಯ ನಿವೃತ್ತ ಸಹಾಯಕ ಲೆಕ್ಕಾಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಅವರು ನಿವೃತ್ತರಿಗೆ ಗೌರವಿಸಿ ಸನ್ಮಾನಿಸಿ, ನಿವೃತ್ತಿಯ ನಂತರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಎತ್ತರವಾದ ಮೆಟ್ಟಲುಗಳನ್ನು ಹತ್ತಬಾರದು, ವಾಕಿಂಗ್ ಮಾಡುವಾಗ ಒಬ್ಬರ ಜೊತೆಗೆ ಇರಬೇಕು, ನೆಲದ ಮೇಲೆ ಕಾಲಿಡುವಾಗ ಎಚ್ಚರದಿಂದ ಇರಬೇಕು, ಬಚ್ಚಲು ಮನೆಯಲ್ಲಿ ಸ್ವಚ್ಛತೆ ಇರಬೇಕು, ಕಾಲು ಜಾರಬಾರದು ಭಾರವಾದ ಸಾಮಾನುಗಳನ್ನು ಎತ್ತಬಾರದು, ಒಂಟಿ ಜೀವನ ಇದ್ದರೆ ಒಬ್ಬ ಸಹಾಯಕನನ್ನ ಇಟ್ಟುಕೊಳ್ಳಬೇಕು ಆಹಾರದಲ್ಲಿ ಮಿತವಿರಬೇಕು, ಆಗಾಗ್ಗೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು, ದೂರ ಸಂಚಾರವನ್ನು ಬಿಡಬೇಕು, ದುಷ್ಟ ಚಟಗಳಿಂದ ದೂರವಿರಬೇಕು, ಹೃದಯಾಘಾತವಾಗದಂತೆ ಎಚ್ಚರವಿರಬೇಕು, ಪುಣ್ಯದ ಕೆಲಸಗಳನ್ನು ಮಾಡಬೇಕು, ಸಾಧ್ಯವಾದರೆ ಬಡವರಿಗೆ ಸಹಾಯ ಮಾಡಬೇಕು, ಮೊಮ್ಮಕಳನ್ನು ಆಡಿಸಬೇಕು, ಜಂಕ್ ಫುಡ್ ಬಿಡಬೇಕು, ಮರಳಿ ಬಾರದ ಲೋಕಕ್ಕೆ ನಾವು ಹೋಗುತ್ತಿದ್ದೇವೆ ಎಂದು ನೆನಪಿಟ್ಟುಕೊಳ್ಳಬೇಕು, ಚಿಂತಿಸಬಾರದು, ತಂದೆ ತಾಯಿಯನ್ನು ಕಾಪಾಡಬೇಕು, 60 ನಂತರ ಅರಳು ಮರಳು ಎನ್ನುತ್ತಾರೆ ಆದರೆ ನಾವು ಮರಳಿ ಅರಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರದ ಕಾರ್ಯನಿರ್ವಾಹಕ ಅಭಿಯಂತರಾದ ರಾಘವೇಂದ್ರ, ಡಿಸಿಎ ಆನಂದ್, ಲೆಕ್ಕಾಧಿಕಾರಿಗಳು, ಕಾರ್ಮಿಕ ಮುಖಂಡರು, ನಿವೃತ್ತ ನೌಕರರ ಕುಟುಂಬ ವರ್ಗದವರು ಜೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು