ಹೆಸರಿಗಾಗಿ, ಐಶ್ವರ್ಯಗಾಗಿ ನಾವು ಬಡಿದಾಡಬಾರದು


ಮುನವಳ್ಳಿ,ಜ.೧೧: ಪಟ್ಟಣದ ಶ್ರೀ ಸೋಮಶೇಖರ ಮಠದಲ್ಲಿ ಶುಕ್ರವಾರ ಜರುಗಿದ ಲಿಂ. ಬಸವಲಿಂಗ ಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಸಾನಿಧ್ಯ ವಹಿಸಿ ಅರಳಿಕಟ್ಟಿಯ ತೋಂಟದಾರ್ಯಮಠದ ಶ್ರೀ ಶಿವಮೂರ್ತಿ ಶ್ರೀಗಳು ಆಶಿರ್ವಚನದಲ್ಲಿ ಹೆಸರಿಗಾಗಿ, ಐಶ್ವರ್ಯಗಾಗಿ ನಾವು ಬಡಿದಾಡಬಾರದು, ಸುಮ್ಮನೆ ಕಾಯಕ ಮಾಡುತ್ತ ಸಾಗಬೇಕು ಮಹಾತ್ಮರಾದವರು ಎಂದಿಗೂ ಹೆಸರಿಗಾಗಿ ಬಡಿದಾಡಲಿಲ್ಲ ನಾನು ನನ್ನದು ಎನ್ನುವ ಭಾವನೆ ತೊರೆದರೆ ಆತ್ಮೋನ್ನತಿಯಾಗುತ್ತದೆ ಅದಕ್ಕೆಂದೇ ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದಿದ್ದಾರೆ.

ವ್ಯಕ್ತಿತ್ವ ವಿಕಸನದಲ್ಲಿ ವಚನಗಳ ಪಾತ್ರ ಮಹತ್ವದ್ದಾಗಿವೆ. ಶರಣರು ನಮಗೆ ವಚನಗಳನ್ನು ನೀಡಿ ಮಹದುಪಕಾರ ಮಾಡಿದ್ದಾರೆ ನಿತ್ಯ ವಚನಗಳನ್ನು ಪಠಿಸಿದರೆ ಜೀವನದಲ್ಲಿ ಬದಲಾವಣೆ ಸಾಧ್ಯ ಹೆಸರಿನ ಹಿಂದೆ ಹೊರಟರೆ ಸಾಧನೆ ಶೂನ್ಯ ವಾಗುತ್ತದೆ ನೀರು, ಗಾಳಿ ಒಮ್ಮೆಯೂ ತಮ್ಮ ಹೆಸರನ್ನು ಎಲ್ಲಿಯೂ ಹೇಳದೆ ಮಾನವನಿಗೆ ಉಪಕಾರ ಮಾಡುತ್ತಿವೆ ಹಾಗೆಯೇ ನಾವೂ ಕೂಡ ನಮ್ಮಿಂದಾದ ಕಾರ್ಯವನ್ನು ಮಾಡುತ್ತ ಸಾಗಿದಾಗ ಮಾತ್ರ ನಮ್ಮ ತನ್ನಿಂದತಾನೆ ಸಾರ್ವಜನಿಕರಲ್ಲಿ ಮೂಡುತ್ತದೆ ಎಂದರು.

ಹೊಸಳ್ಳಿಯ ಬೂದೀಶ್ವರ ಶ್ರೀಗಳು, ನರಗುಂದದ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಗೊರವನಕೊಳ್ಳದ ಶಿವಾನಂದ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೇಣುಕ ಶಿವಯೋಗಿ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಕಡಬಿ ಶಿವಾಪೂರದ ಜಡಿತಲೆ ಮರುಳಸಿದ್ದ ಶಿವಾಚಾರ್ಯ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಬಂಗಾರಜ್ಜನ ಮಠದ ವಿರೂಪಾಕ್ಷಯ್ಯ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ದಂಡಾಧಿಕಾರಿ ಮಲ್ಲಿಕಾರ್ಜುನ ಹೆಗ್ಗಣ್ಣವರ, ಅಸಿಸ್ಟಂಟ ಕಮೀಶನರ ಯಲ್ಲರಾಜ ಶಿಂಗಣ್ಣವರ, ಬಿ.ಇ.ಓ ಎ.ಎ.ಖಾಜಿ, ವೀರಣ್ಣ ಕಮ್ಮಾರ, ಡಾ. ಎಂ.ಬಿ.ಅಷ್ಟಗಿಮಠ, ಇವರುಗಳಿಗೆ ಶ್ರೀಗಳಿಂದ ಗೌರವ ಸತ್ಕಾರ ಜರುಗಿತು.

ಅಂಬರೀಷ ಯಲಿಗಾರ, ಶ್ರೀಶೈಲ ಗೋಪಶೆಟ್ಟಿ, ದಾನಪ್ಪ ಗದಗಿನ, ಈರಣ್ಣ ಸಂಕಣ್ಣವರ, ಮೆಹಮೂದ ಲಂಗೋಟಿ, ಶಂಕರ ಜೋಗೋಜಿ, ಶೇಖರ ಮುಪ್ಪಿನವರಮಠ, ವಿಠ್ಠಲ ನಲಗೆ, ಜಂಗಮಾಭಿವೃದ್ದಿ ಸೇವಾ ಸಮಿತಿಯವರು ಇತರರು ಉಪಸ್ಥಿತರಿದ್ದರು.
ಶಿಕ್ಷಕ ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು, ಗಂಗಾದರ ಗೊರಾಬಳ ವಂದಿಸಿದರು.