Home ಮುಖಪುಟ ಸುದ್ದಿ ಉಪಕದನ ಬಿರುಸಿನ ಮತದಾನ: ಬಿಗಿ ಭದ್ರತೆ

ಉಪಕದನ ಬಿರುಸಿನ ಮತದಾನ: ಬಿಗಿ ಭದ್ರತೆ

ಬೆಂಗಳೂರು, ಏ. ೯- ರಾಜ್ಯದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಸಾಗಿದೆ.


ಎರಡು ಕ್ಷೇತ್ರಗಳಲ್ಲೂ ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಸಾಲುಗಟ್ಟಿ ನಿಂತು ಮತ ಚಲಾಯಿಸುತ್ತಿದ್ದಾರೆ.


ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದು, ಎರಡು ಕ್ಷೇತ್ರಗಳಲ್ಲೂ ಮಧ್ಯಾಹ್ನದ ವೇಳೆಗೆ ಶೇ. ೨೫ ರಿಂದ ೩೦ ರಷ್ಟು ಮತದಾನವಾಗಿತ್ತು.


ಬಿಸಿಲಿನ ಝಳ ತಪ್ಪಿಸಿಕೊಳ್ಳಲು ಮತದಾರರು ಬೆಳಿಗ್ಗೆಯೇ ಮತದಾರರು ಹೆಚ್ಚು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು.


ಎರಡು ಕ್ಷೇತ್ರಗಳಲ್ಲೂ ಮತದಾನ ಶಾಂತಿಯುತವಾಗಿ ಸಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.


ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಮಲ್ಲಿಕಾರ್ಜುನ್ ಹಾಗೂ ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ನಡುವೆ ಗೆಲುವಿಗೆ ಪೈಪೋಟಿ ಇದ್ದು, ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿ ಮಠ ನಡುವೆ ಸ್ಪರ್ಧೆ ಏರ್ಪಟ್ಟಿದೆ.


ಈ ಎರಡು ಕ್ಷೇತ್ರಗಳ ಉಪಚುನಾವಣೆಗಳು ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದು, ವಿಪಕ್ಷವಾದ ಬಿಜೆಪಿ ಕಾಂಗ್ರೆಸ್‌ನ ಭದ್ರಕೋಟೆಯನ್ನು ಬೇಧಿಸಿ ಗೆಲುವು ಸಾಧಿಸಲು ಹರಸಾಹಸ ನಡೆಸಿದೆ.


ಎರಡು ಕ್ಷೇತ್ರಗಳಲ್ಲೂ ಘಟಾನುಘಟಿ ನಾಯಕರುಗಳು ಮತ ಹಾಕಿದ್ದು, ದಾವಣಗೆರೆ ವಿರಕ್ತ ಮಠದ ಡಾ. ಬಸವ ಪ್ರಭು ಸ್ವಾಮೀಜಿಯವರು ಮತ ಚಲಾಯಿಸಿದರು.
ಮತಗಟ್ಟೆಯ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಕಾವಲನ್ನು ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.