
ಬೆಂಗಳೂರು, ಏ. ೯- ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ಪೆಟ್ರೋಲ್-ಡೀಸೆಲ್, ಗ್ಯಾಸ್ ಎಲ್ಲವೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟದ್ದು. ಇದರಲ್ಲಿ ಏನಾದರೂ ವ್ಯತ್ಯಯಗಳಾದರೆ ಅದಕ್ಕೆ ಕೇಂದ್ರವೇ ಹೊಣೆ ಎಂದು ರಾಜ್ಯದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
ಆಟೋ ಚಾಲಕರು ಗ್ಯಾಸ್ ಸಿಗದಿದ್ದಕ್ಕೆ ರಾಜ್ಯ ಸರ್ಕಾರದ ಮೇಲೆ ಆಕ್ರೋಶಗೊಂಡಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಪ್ರತಿಕ್ರಿಯಿಸಿದ ಅವರು, ಗ್ಯಾಸ್ ಕೊರತೆಯಲ್ಲಿ ನಮ್ಮ ಪಾತ್ರ ಇಲ್ಲ. ನಾವು ಕಾಳಸಂತೆಯಲ್ಲಿ ಮಾರಾಟವಾಗದಂತೆ ಏಜೆನ್ಸಿಗಳು ಸಮರ್ಪಕವಾಗಿ ಹಂಚಿಕೆ ಮಾಡದಿದ್ದರೆ ಅಂತಹ ವಿಚಾರಗಳ ಬಗ್ಗೆ ಗಮನ ಹರಿಸುತ್ತೇವೆ. ಗೃಹ ಸಚಿವರ ಜತೆ ಮಾತನಾಡಿದ್ದೇನೆ. ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿದೆ ಎಂದರು.
ಎಲ್‌ಪಿಜಿ ಸಮಸ್ಯೆಯಿಂದ ಸಂಕಷ್ಟಗಳು ಎದುರಾಗಿದ್ದು, ಆಟೋ ಚಾಲಕರು ಗ್ಯಾಸ್ ಸಿಗದೆ ಆಗಿರುವ ತೊಂದರೆಯನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ನಾಳೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಕೇಂದ್ರಕ್ಕೂ ಎಲ್‌ಪಿಜಿ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಇನ್ನು ಉತ್ತರ ಬಂದಿಲ್ಲ ಎಂದು ಹೇಳಿದರು.
ಅಕ್ಕಪಕ್ಕದ ರಾಜ್ಯಗಳಲ್ಲಿ ಎಲ್‌ಪಿಜಿ ಸಮಸ್ಯೆ ಇಲ್ಲ. ನಮ್ಮಲ್ಲೇ ಕೊರತೆ ಇರುವುದು. ಕೇಂದ್ರದಿಂದ ಮಲತಾಯಿ ಧೋರಣೆ ಆಗಿದೆ. ರಾಜ್ಯಕ್ಕೆ ಸಮರ್ಪಕವಾಗಿ ಎಲ್‌ಪಿಜಿ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.
ಎಲ್‌ಪಿಜಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕುತ್ತಿದ್ದೇವೆ. ತೂಕ ಮತ್ತು ಅಳತೆ ಇಲಾಖೆಯ ಸಭೆಯನ್ನು ಕರೆದಿದ್ದೇನೆ. ಅವರಿಗೂ ಕಾಳಸಂತೆ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಸೂಚನೆ ಕೊಟ್ಟಿದ್ದೇನೆ. ಜತೆಗೆ ಎಲ್ಲಾ ತೈಲ ಕಂಪೆನಿಗಳ ಮುಖ್ಯಸ್ಥರ ಸಭೆಯನ್ನು ನಾಳೆ ಕರೆದು ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯದ ಹಲವೆಡೆ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ತೆಗೆದು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರ್ಹ ಬಿಪಿಎಲ್ ಕಾರ್ಡ್‌ದಾರರ ಕಾರ್ಡ್‌ಗಳನ್ನು ತೆಗೆದು ಹಾಕಿಲ್ಲ. ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡಿದ್ದೇವೆ ಅಷ್ಟೇ ಎಂದು ಹೇಳಿದರು.























