
ಜೆರುಸಲೆಮ್,ಮಾ.೨೪- ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಚರ್ಚೆಗಳು ಅನಿರೀಕ್ಷಿತ ಪ್ರಗತಿ ಸಾಧಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ- ಇಸ್ರೇಲ್ ಸಾರಿರುವ ಯುದ್ಧ ಏಪ್ರಿಲ್ ೯ ರಂದು ಕೊನೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇರಾನ್‌ನ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳನ್ನು ಅಮೆರಿಕ ೫ ದಿನಗಳು ತಡೆಹಿಡಿಯುವ ನಿರ್ಧಾರ ಘೋಷಿಸಿದ ನಂತರ, ಸರ್ಕಾರಿ ಉನ್ನತ ಮೂಲಗಳನ್ನುದ್ದೇಶಿಸಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಏಪ್ರಿಲ್ ೯ ಅನ್ನು ಸಂಭಾವ್ಯ ದಿನಾಂಕವಾಗಿ ನಿಗದಿಪಡಿಸಿದೆ ಎಂದು ಹೇಳಲಾಗಿದೆ.
ಯುದ್ಧ ನಿಲ್ಲಿಸುವ ಸಂಬಂಧ ಪಾಕಿಸ್ತಾನದ ನೇತೃತ್ವದಲ್ಲಿ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬೆಳವಣಿಗೆಯನ್ನು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ತಿರಸ್ಕರಿಸಿದ್ದಾರೆ.
ಜಗತ್ತಿನ ವಿವಿಧ ದೇಶಗಳಿಗೆ ಶೇಕಡಾ ೨೦ ರಷ್ಟು ಕಚ್ಚಾ ತೈಲ ಪೂರೈಕೆ ಮಾಡುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚದಿದ್ದರೆ ಇರಾನ್‌ನ ಇಂಧನ ಮೂಲ ಸೌಲಭ್ಯದ ಮೇಲೆ ಅಮೆರಿಕ ದಾಳಿ ಮಾಡಲಿದೆ. ಜೊತೆಗೆ ಈ ಸಂಬಂಧ ೫ ದಿನ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ಬೆನ್ನಲ್ಲೇ ಇಂತಹದೊಂದು ಚರ್ಚೆ ನಡೆದಿದೆ.
ಯುದ್ಧವನ್ನು ಕೊನೆಗೊಳಿಸಲು ಏಪ್ರಿಲ್ ೯ ಅನ್ನು ಗುರಿಯನ್ನು ಅಮೆರಿಕ ದಿನಾಂಕವಾಗಿ ನಿಗದಿಪಡಿಸಿದೆ. ನಿರಂತರ ಹೋರಾಟ ಮತ್ತು ಮಾತುಕತೆಗಳಿಗೆ ಸುಮಾರು ೨೧ ದಿನಗಳು ಅಗತ್ಯವಿದೆ ಎಂದು ಇಸ್ರೇಲ್‌ನ ಅತಿದೊಡ್ಡ ಪತ್ರಿಕೆಗಳಲ್ಲಿ ಒಂದಾದ ಯೆಡಿಯೊತ್ ಅಹ್ರೋನೋತ್ ದಿನಪತ್ರಿಕೆ ಉನ್ನತ ಮೂಲಗಳನ್ನು ಉದ್ದೇಶಿಸಿ ಈ ಮಾಹಿತಿ ಹೊರಹಾಕಿದೆ.
ಈ ತಿಂಗಳ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಇಸ್ರೇಲ್ ಪ್ರಶಸ್ತಿಯನ್ನು ಸ್ವೀಕರಿಸಲು ಇಸ್ರೇಲ್‌ಗೆ ಭೇಟಿ ನೀಡುವ ಮುನ್ನ ಯುದ್ಧ ಕೊನೆಗೊಳ್ಳಲಿದೆ. “ಏಪ್ರಿಲ್ ೯ ರಂದು ಯುದ್ಧ ಕೊನೆಗೊಳಿಸುವುದರಿಂದ ಡೊನಾಲ್ಡ್ ಟ್ರಂಪ್ ಸ್ವಾತಂತ್ರ್ಯ ದಿನಾಚರಣೆಗೆ ಇಸ್ರೇಲ್‌ಗೆ ಆಗಮಿಸಿ ಇಸ್ರೇಲ್ ಪ್ರಶಸ್ತಿ ಸ್ವೀಕರಿಸಲು ಅವಕಾಶ ನೀಡುತ್ತದೆ” ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾಕ್ ಮದ್ಯವರ್ತಿ
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಭೆ ಕರೆಯಲು ಪ್ರಯತ್ನಿಸುತ್ತಿವೆ ಎಂದು ಹೆಸರೇಳಲು ಇಚ್ಚಿಸದ ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್ ಇಂತಹ ಚರ್ಚೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಇದೊಂದು ಅರ್ಥವಿಲ್ಲದ ಮಾಹಿತಿ.ಅಮೇರಿಕಾ ಅಧ್ಯಕ್ಷ ಡೊಣಾಲ್ಡ್ ಟ್ರಂಪ್ ತಮ್ಮ ದೇಶದ ಹಣಕಾಸು ಮಾರುಕಟ್ಟೆಗಳನ್ನು ಕುಶಲತೆಯಿಂದ ನಿರ್ವಹಿಸುವ ಗುರಿ ಹೊಂದಿದ್ದಾರೆ ಇದೊಂದು “ನಕಲಿ ಸುದ್ಧಿ” ಎಂದು ಹೇಳಿದ್ದಾರೆ.
ಉನ್ನತ ನಾಯಕರ ಭೇಟಿ
ಈ ನಡುವೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಮೆರಿಕದ ಶಾಂತಿ ಕಾರ್ಯಾಚರಣೆಗಳ ವಿಶೇಷ ಅಧ್ಯಕ್ಷೀಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಉದ್ಯಮಿ ಮತ್ತು ಅಮೆರಿಕದ ಅಧ್ಯಕ್ಷರ ಮಾಜಿ ಹಿರಿಯ ಸಲಹೆಗಾರ ಜೇರೆಡ್ ಕುಶ್ನರ್ ಅವರು ಇಸ್ಲಾಮಾಬಾದ್‌ನಲ್ಲಿ ಇರಾನಿನ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ಶ್ವೇತಭವನ ಔಪಚಾರಿಕವಾಗಿ ಘೋಷಿಸುವವರೆಗೆ ಯಾವುದನ್ನು ಅಂತಿಮವೆಂದು ಪರಿಗಣಿಸಬಾರದು ಇವು ಸೂಕ್ಷ್ಮ ರಾಜತಾಂತ್ರಿಕ ಚರ್ಚೆಗಳಾಗಿವೆ ಎಂದಿದ್ದಾರೆ.
ಇಂತಹ ಮಹತ್ವದ ವಿಷಯಗಳನ್ನು ಅಮೆರಿಕದ ಪತ್ರಿಕಾ ಮೂಲಕ ಮಾತುಕತೆ ನಡೆಸುವುದಿಲ್ಲ. ಅಸ್ಥಿರ ಪರಿಸ್ಥಿತಿ, ಮತ್ತು ಸಭೆಗಳ ಕುರಿತಾದ ಊಹಾಪೋಹಗಳನ್ನು ಶ್ವೇತಭವನ ಔಪಚಾರಿಕವಾಗಿ ಘೋಷಿಸುವವರೆಗೆ ಅಂತಿಮವೆಂದು ಪರಿಗಣಿಸಬಾರದು” ಎಂದು ತಿಳಿಸಿದ್ದಾರೆ.
ನಾಲ್ಕನೇ ವಾರಕ್ಕೆ ಕಾಲಿಟ್ಟ ಯುದ್ಧ
ಇರಾನ್ ಮೇಲೆ ನಡೆಯುತ್ತಿರುವ ಯುದ್ದ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ, ದಾಳಿ ಪ್ರತಿದಾಳಿಯಲ್ಲಿ ನಾಗರಿಕ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಅಮೇರಿಕಾ ನಡೆಸಿದ ಸ್ಪೋಟದಲ್ಲಿ ಇರಾನ್‌ನ ಪರಸ್ತೇಶ್ ದಹಾಘಿನ್ ಮತ್ತು ಬೆರಿವಾನ್ ಮೊಲಾನಿ ಎನ್ನುವ ಇಬ್ಬರು ಯುವ ಔಷಧಿಕಾರರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ವೇಳೆ ಅಮೆರಿಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದರೂ ಇಸ್ರೇಲ್- ಇರಾನ್ ಮೇಲೆ ದಾಳಿ ಮುಂದುವರೆಸಿದೆ.
ಅಮೇರಿಕಾದ ವಾಯುದಾಳಿ ನಡೆಸಿದ ಸಂಧರ್ಭದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪರಸ್ತೇಶ್ ದಾಹಾಘಿನ್ ಮತ್ತು ಬೆರಿವಾನ್ ಮೊಲಾನಿ ಅವರ ತಲೆಗೆ ಕ್ಷಿಪಣಿ ಬಡಿದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕಳೆದ ನಾಲ್ಕು ವಾರಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯದ್ಧದಲ್ಲಿ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ನಗರಗಳು ಅಮೆರಿಕ ಮತ್ತು ಇಸ್ರೇಲಿ ವಾಯುದಾಳಿಗಳಿಂದ ನಾಶವಾಗುತ್ತಿವೆ. ದೇಶಾದ್ಯಂತ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
ದಾಳಿಗಳಿಂದ ನಾಗರಿಕ ಸಾವುನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಕಳೆದ ನಾಲ್ಕು ವಾರಗಳಿಂದ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಥಗಿತವಾಗಿದೆ. ಮೊಬೈಲ್ ನೆಟ್ ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇರಾನ್ ಮೇಲೆ ಅಮೆರಿಕಾ-ಇಸ್ರೇಲಿ ಯುದ್ಧದ ನಾಗರಿಕ ಸಾವುನೋವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ಇರಾನ್ ಮಾನವ ಹಕ್ಕುಗಳ ದಾಖಲೆ ಕೇಂದ್ರದ ಪ್ರಕಾರ, ಇರಾನ್‌ನ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಲ್ಲಿ ಪಾತ್ರವಹಿಸಿದ್ದ ಐಟಿ ಕಂಪನಿಯ ಹತ್ತಿರದ ಕಟ್ಟಡವನ್ನು ಹೊಡೆದುರುಳಿಸಿದಾಗ ಪರಸ್ತೇಶ್ ದಹಗೈನ್ ಟೆಹ್ರಾನ್‌ನ ಅಪಡಾನಾ ನೆರೆಹೊರೆಯಲ್ಲಿರುವ ತನ್ನ ಔಷಧಾಲಯದಲ್ಲಿದ್ದರು ಎಂದು ಹೇಳಲಾಗಿದೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಪರಸ್ತೇಶ್ ಅವರಿಗೆ ಕಚೇರಿಯ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ದಾಳಿಯಲ್ಲಿ ಆಕೆಯ ಸಹೋದರ ಪೂರ್ಯ ಕೂಡ ಹತ್ಯಯಾಗಿದ್ದು ಇದೀಗ ಸಹೋದರಿಯನ್ನು ಕುಟುಂಬ ಕಳೆದುಕೊಂಡಿದೆ.
ಇರಾನ್‌ನ ರಾಜಧಾನಿ ಟೆಹ್ರಾನ್ ಸುರಕ್ಷಿತವಾಗಿಲ್ಲ. ದಾಳಿ ಪ್ರತಿದಾಳಿಯಿಂದ ಆರೋಗ್ಯ ಮೂಲ ಸೌಕರ್ಯದ ಮೇಲೆ ಪರಿಣಾಮ ಬೀರಿದೆ.





























