
ಕಲಬುರಗಿ: ಮನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಮೃತಪಟ್ಟಿರುವ ಘಟನೆ ಹೀರಾಪೂರ ಪ್ರದೇಶದ ಬಬಲಾದ ರಸ್ತೆ ಸಮೀಪ ಮಾದರಸನಹಳ್ಳಿಯಲ್ಲಿ ಬುಧವಾರ ನಡೆದಿದೆ.
ಹೀರಾಪೂರ ವ್ಯಾಪ್ತಿಯ ಮಾದರಸನಹಳ್ಳಿಯ ನಿವಾಸಿ ಆಗಿರುವ ಮನೆ ಮಾಲಕ ಶಿವಕುಮಾರ್ ನಂದುರಕರ(51) ಹಾಗೂ ಅವರ ಗೆಳೆಯ ಎನ್ನಲಾಗುತ್ತಿರುವ ಇಂದಿರಾ ನಗರದ ನಿವಾಸಿ ರತನ್ ಹೊಟ್ಕರ್ (58) ಮೃತಪಟ್ಟವರು ಎಂದು ತಿಳಿದುಬಂದಿದೆ.
ಶಿವಕುಮಾರ್ ನಂದುರಕರ ಹಾಗೂ ರತನ್ ಹೊಟ್ಕರ್ ಇಬ್ಬರು ಸ್ನೇಹಿತರಾಗಿದ್ದು, ಆಗಾಗ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದರು ಎನ್ನಲಾಗಿದೆ. ಅದರಂತೆಯೇ ಮೃತ ಶಿವಕುಮಾರ್ ಅವರ ಮನೆ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗೆ ಬುಧವಾರ ಬೆಳಗ್ಗೆ ಇಳಿದಿದ್ದರು ಎನ್ನಲಾಗಿದ್ದು, ಈ ವೇಳೆ ಉಸಿರುಗಟ್ಟಿ ಹೊರಗಡೆ ಬರಲಾರದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

























