
ಕಲಬುರಗಿ,ಫೆ.25-ಜಿಲ್ಲೆಯ ಸೇಡಂ ಮತ್ತು ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ಮನೆಯೊಳಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ, ಖತರ್ನಾಕ್ ಕಳ್ಳರನ್ನು ಬಂಧಿಸಿ 26,5,400 ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೊಲೀಸ್ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೇಡಂ ಮತ್ತು ಮಳಖೇಡ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಹಗಲು ಹೊತ್ತಿನಲ್ಲಿ ಮಳೆಯೊಳಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನಕ್ಕೆ ಎಸ್‍ಪಿ, ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಚಿಂಚೋಳಿ ಡಿಎಸ್‍ಪಿ ಸಂಗಮನಾಥ ಎಸ್.ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸೇಡಂ ಸಿಪಿಐ ಮಹಾದೇವ ಡಿ.ಅವರ ನೇತೃತ್ವದಲ್ಲಿ ಸೇಡಂ ಠಾಣೆ ಪಿಎಸ್‍ಐಗಳಾದ ಉಪೇಂದ್ರಕುಮಾರ, ಶರಣಪ್ಪ, ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಮೋಹನರೆಡ್ಡಿ, ಯಲಗೂರೇಶ, ಸಂತೋಷ, ಮಾರುತಿ, ಬಸಲಿಂಗಪ್ಪ, ಬಲರಾಮ, ಹೊನ್ನಪ್ಪ, ನಾಗರಾಜ, ಬಾಲಕೃಷ್ಣ ರೆಡ್ಡಿ, ಸದಾಶಿವ, ಮಾಣಿಕರಾವ ಮತ್ತು ನಾಗರಾಜ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆಳಂದ ತಾಲ್ಲೂಕಿನ ಝಳಕಿ ತಾಂಡಾದ ಕರಣ್ ತಂದೆ ರಂಗು ಪವಾರ (26) ಮತ್ತು ಕಂಸರನಾಯಕ ತಾಂಡಾದ ರಾಮದಾಸ ತಂದೆ ಗಂಗಾರಾಮ ಚವ್ಹಾಣ್ (45) ಎಂಬುವವರನ್ನು ಬಂಧಿಸಿ 25,57,500 ರೂ.ಮೊತ್ತದ 15.5 ಗ್ರಾಂ.ಬಂಗಾರದ ಆಭರಣಗಳು, 96,900 ರೂ.ಮೌಲ್ಯದ 340 ಗ್ರಾಂ.ಬೆಳ್ಳಿ ಆಭರಣಗಳು ಸೇರಿ 26,5,400 ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಕುಖ್ಯಾತ ಕಳ್ಳರನ್ನು ಬಂಧಿಸಿ ಚಿನ್ನ, ಬೆಳ್ಳಿ ಆಭರಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಚಿಂಚೋಳಿ ಡಿಎಸ್‍ಪಿ ಸಂಗಮನಾಥ ಎಸ್.ಹಿರೇಮಠ, ಸೇಡಂ ಸಿಪಿಐ ಮಹಾದೇವ ಡಿ., ಸೇಡಂ ಠಾಣೆ ಪಿಎಸ್‍ಐಗಳಾದ ಉಪೇಂದ್ರಕುಮಾರ, ಶರಣಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.























