
ಬೆಂಗಳೂರು,ಅ.೯-ಕೆಲಸ ಮಾಡಿಕೊಂಡಿದ್ದ ಜ್ಯೂವೆಲರಿ ಅಂಗಡಿಯಲ್ಲಿಯೇ, ಚಿನ್ನಾಭರಣಗಳನ್ನು ಕಳುವು ಮಾಡಿದ್ದ ಇಬ್ಬರನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು ೪೫ ಲಕ್ಷ ಮೌಲ್ಯದ ೪೨೯.೦೨ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹವೀರ್ ಸಿಂಗ್ (೨೦)ಕುಲದೀಪ್ ಸಿಂಗ್(೨೨)ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ೪೫ ಲಕ್ಷ ಮೌಲ್ಯದ ೪೨೯.೦೨ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಜಾಲಹಳ್ಳಿಯ ಮುತ್ಯಾಲನಗರದಲ್ಲಿ ಜ್ಯೂವೆಲರಿ ಅಂಗಡಿಯ ಮಾಲೀಕ ಹಾಗೂ ಅವರ ಪುತ್ರ ಸೆ.೨೬ ರಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗಿದ್ದ ವೇಳೆ ಕೆಲಸಕ್ಕಿದ್ದ ಅಂಗಡಿಯ ಲಾಕರ್‌ನಲ್ಲಿದ್ದ ೫೪೦ ಗ್ರಾಂ ಚಿನ್ನದ ಆಭರಣಗಳನ್ನು ಕಳುವು ಪರಾರಿಯಾಗಿದ್ದ ಪ್ರಕರಣ ದಾಖಲಿಸಿದ ಜಾಲಹಳ್ಳಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಉಪ್ಪಾರಪೇಟೆಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ, ಜ್ಯೂವೆಲರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ಹಾಗೂ ಆತನಿಗೆ ಕಳವು ಮಾಡಲು ಸಹಕರಿಸಿದ ಸಹಚರ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಜಾಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.