ಕೋಲಾರ,ಅ,೧೦-ಕೇವಲ ಆರು ತಿಂಗಳಲ್ಲಿ ಪಿಹೆಚ್‌ಡಿಯ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕೋರ್ಸ್ ವರ್ಕ್ ತರಗತಿಗಳು, ಪರೀಕ್ಷೆಗಳನ್ನು ನಡೆಸಿ, ಕೇವಲ ಒಂದು ಗಂಟೆಯಲ್ಲಿ ಫಲಿತಾಂಶವನ್ನು ನೀಡಿದ್ದಲ್ಲದೇ ಇದೀಗ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೋಂದಣಿ ದೃಢೀಕರಣ ಪತ್ರಗಳನ್ನು ವಿತರಿಸಿರುವ ದೇಶದ ಮೊದಲ ವಿದ್ಯಾಲಯ ಎಂಬ ಖ್ಯಾತಿಗೆ ಬೆಂಗಳೂರು ಉತ್ತರ ವಿವಿ ಪಾತ್ರವಾಗಿದೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ವೇಣುಗೋಪಾಲ್ ಶ್ಲಾಘಿಸಿದರು.
ಕೋಲಾರದ ಬೆಂಗಳೂರು ಉತ್ತರ ವಿವಿಯ ಪ್ರಧಾನ ಕಚೇರಿಯಲ್ಲಿ ೯ ವಿಷಯಗಳ ಪಿಹೆಚ್‌ಡಿ ಕೋರ್ಸಿನ ೭೮ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬೆಂಗಳೂರು ಉತ್ತರ ವಿವಿ ಆಡಳಿತವನ್ನು ಅಭಿನಂದಿಸಿದ ಅವರು, ಇಲ್ಲಿ ವಿವಿಧ ಕೋರ್ಸುಗಳಿಗೆ ನೀಡಿರುವ ಅವಕಾಶ, ಆಡಳಿತ,ಬೋಧನಾ ವೈಖರಿ ಮಾದರಿಯಾಗಿದೆ ಎಂದು ತಿಳಿಸಿ, ಇದರಿಂದಾಗಿ ಸಂಶೋಧನಾರ್ಥಿಗಳು ಅತಿ ಕಡಿಮೆ ಅವಧಿಯಲ್ಲಿ ಕೋರ್ಸ್ ಮುಗಿಸಿ ಡಾಕ್ಟರೇಟ್ ಪಡೆಯಲು ಸಹಕಾರಿಯಾಗಿದೆ ಎಂದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಮಾತನಾಡಿ, ಬೆಂಗಳೂರು ಉತ್ತರ ವಿವಿ ಆರಂಭಗೊಂಡ ನಂತರ ಇದು ಮೊದಲ ಹಾಗೂ ಚೊಚ್ಚಲ ಪಿಹೆಚ್‌ಡಿ ಕಾರ್ಯಕ್ರಮವಾಗಿದೆ, ಈ ಮೊದಲ ಅವಧಿಯಲ್ಲೇ ನಾವು ಹಲವು ದಾಖಲೆ ಮಾಡುವ ತವಕದಲ್ಲಿ ಕೆಲಸ ನಿರ್ವಹಿಸಿದ್ದೇವೆ ಎಂದು ತಿಳಿಸಿದರು.
ಪಿಹೆಚ್‌ಡಿ ಮಾಡಲು ಆಯ್ಕೆಯಾಗಿರುವ ಸಂಶೋಧನಾರ್ಥಿಗಳಿಗೆ ಅತ್ಯಂತ ತ್ವರಿತವಾಗಿ ಕೋರ್ಸ್ ವರ್ಕ್ ನಡೆಸಿ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳನ್ನು ಒಂದೇ ದಿನದಲ್ಲಿ ವಿತರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದ ಅವರು, ಇದರಿಂದ ನಮ್ಮ ವಿವಿಯಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿರುವ ವಿದ್ಯಾರ್ಥಿಗಳು ಅತಿ ಶೀಘ್ರವಾಗಿ ತಮ್ಮ ಸಂಶೋಧನಾ ಕಾರ್ಯವನ್ನು ಮುಗಿಸಿ ಡಾಕ್ಟರೇಟ್ ಪದವಿ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಕುಲಸಚಿವ ಶ್ರೀಧರ್, ಹಣಕಾಸು ಅಧಿಕಾರಿ ವಸಂತಕುಮಾರ್, ಮಂಗಸಂದ್ರ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಪ್ರೊ.ಕುಮುದ ಪಿಹೆಚ್‌ಡಿ ಸಂಶೋಧನಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಮುರಳೀಧರ್ ಸೇರಿದಂತೆ ಪಿಎಚ್‌ಡಿ ಮಾರ್ಗದರ್ಶಕರು, ಸಂಶೋಧನಾ ವಿದ್ಯಾರ್ಥಿಗಳು, ವಿವಿ ಸಿಬ್ಬಂದಿ ಹಾಜರಿದ್ದರು.
























