ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ಮುಖ್ಯ: ಮೋಹನ್

ತುಮಕೂರು, ಆ. ೨೧- ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ಬಹಳ ಮುಖ್ಯ ಎಂದು ಆರ್‌ಬಿಐ ಬೆಂಗಳೂರಿನ ಬ್ಯಾಂಕಿಂಗ್ ಒಂಬಡ್ಸ್‌ಮನ್ ಎನ್. ಮೋಹನ್ ಅಭಿಪ್ರಾಯಪಟ್ಟರು.


ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ, ನಂಬಿಕೆಗಳಿಂದ ಗ್ರಾಹಕರನ್ನು ಸೆಳೆಯುವ ಶಕ್ತಿ ಇದೆ. ಗ್ರಾಹಕರ ರಕ್ಷಣೆ ಹಾಗೂ ಅವರಿಗೆ ತಿಳುವಳಿಕೆ ನೀಡುವುದು ಒಂಬುಡ್ಸ್‌ಮನ್ ಕಾರ್ಯಾಲಯದ ಜವಾಬ್ದಾರಿ ಎಂದು ಹೇಳಿದರು.


ಆರ್‌ಬಿಐ ವ್ಯಾಪ್ತಿಯೊಳಗೆ ಬರುವ ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ತೊಂದರೆ ಕಂಡು ಬಂದಾಗ ಆರ್‌ಬಿಐನ ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದಲ್ಲಿ ಶುಲ್ಕ ರಹಿತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಗ್ರಾಹಕರು ತಮ್ಮ ಬ್ಯಾಂಕ್‌ನ ಶಾಖೆಯಲ್ಲಿ ದೂರು ಕೊಡುವ ಸೌಲಭ್ಯ ಇರುತ್ತದೆ. ಬ್ಯಾಂಕ್‌ಗಳು ದೂರು ಸ್ವೀಕರಿಸಿದ ದಿನಾಂಕದಿಂದ ೩೦ ದಿನಗಳ ಒಳಗೆ ದೂರುದಾರರಿಗೆ ಉತ್ತರವನ್ನು ತಿಳಿಸಬೇಕು. ಗ್ರಾಹಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರಿನ ನಮೂನೆಯನ್ನು ಬ್ಯಾಂಕ್‌ನ ವೆಬ್‌ಸೈಟ್‌ನ ಮುಖಪುಟದಲ್ಲಿ ಒದಗಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.


ಆರ್‌ಬಿಐ ಬೆಂಗಳೂರಿನ ಉಪ ಒಂಬುಡ್ಸ್‌ಮನ್ ನಿಧಿ ಅಗರ್ವಾಲ್ ಮಾತನಾಡಿ, ಬ್ಯಾಂಕ್‌ನ ಆಂತರಿಕ ಕುಂದು-ಕೊರತೆಗಳ ಪರಿಹಾರ ವ್ಯವಸ್ಥೆಯ ಬಗ್ಗೆ ವಿವರಿಸಿ ಆರ್‌ಬಿಐ ಒಂಬುಡ್ಸ್‌ಮನ್ ಯೋಜನೆ ೨೦೨೧ರ ಅಡಿಯಲ್ಲಿ ಇರುವ ಪರಿಹಾರ ವಿಧಾನ ಹಾಗೂ ದೂರುಗಳನ್ನು ಆರ್‌ಬಿಐ ಪೋರ್ಟಲ್ ಹಾಗೂ ಇತರೆ ಮಾಧ್ಯಮದ ಮೂಲಕ ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರಲ್ಲದೆ ಬ್ಯಾಂಕ್ ವಂಚನೆಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ತಿಳಿಸಿದರು.


ಗ್ರಾಹಕರಿಗಾಗಿ ಪ್ರತಿಯೊಂದು ಬ್ಯಾಂಕಿಂಗ್ ಸೇವೆಗಳನ್ನು ಡಿಜಿಟಲ್‌ಗೊಳಿಸಿ ಅವರ ಕೈಯಲ್ಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಡಿಜಿಟಲ್ ವಹಿವಾಟು ಸುರಕ್ಷಿತ ಎಂಬ ಧೈರ್ಯ ಮೂಡಿಸುವ ಸಲುವಾಗಿ ಒಂಬುಡ್ಸ್‌ಮನ್ ಕಾರ್ಯಾಲಯವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗ್ರಾಹಕರ ಪ್ರತಿಯೊಂದು ರೂಪಾಯಿಯೂ ವ್ಯತ್ಯಾಸವಾಗದಂತೆ ಸುರಕ್ಷಿತವಾಗಿಡುವುದು ಬ್ಯಾಂಕಿಂಗ್ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ ಎಂದು ಹೇಳಿದರು.


ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಒಂಬುಡ್ಸ್‌ಮನ್ ಯೋಜನೆ ೨೦೨೧ಕ್ಕೆ ಸಂಬಂಧಿಸಿದ ಕರಪತ್ರ ಹಾಗೂ ಕಿರು ಹೊತ್ತಿಗೆಗಳನ್ನು ಹಂಚಲಾಯಿತು.


ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ನ ಮುಖ್ಯ ಜನರಲ್ ಮ್ಯಾನೇಜರ್ ಮಹೇಶ್ ಎಂಪೈ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಲೇಖಾಮೆನನ್, ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕ ಚೈತನ್ಯ ಕಂಚಿಬೈಲ್ ಸೇರಿದಂತೆ ಇತರೆ ಬ್ಯಾಂಕ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.


ಸುಮಾರು ೮೫೦ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಶ್ನೋತ್ತರ ಅವಧಿಯನ್ನು ಸಹ ಏರ್ಪಡಿಸಲಾಗಿತ್ತು. ಸಭಿಕರ ಪ್ರಶ್ನೆಗಳಿಗೆ ಆರ್‌ಬಿಐನ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಹಾಗೂ ಇತರ ಬ್ಯಾಂಕ್‌ಗಳ ಅಧಿಕಾರಿಗಳು ಉತ್ತರ ನೀಡಿದರು.