
ಬೆಂಗಳೂರು,ಫೆ.೧೯- ‘ವೇತನ ಹೆಚ್ಚಳದ ಹಿಂಬಾಕಿ, ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರು ಇಂದು ಬೆಂಗಳೂರು ಚಲೋ’ ನಡೆಸಿದರು.
ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೂರಾರು ನೌಕರರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ನಡೆಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ನೌಕರರಿಗೆ ೩೮ ತಿಂಗಳ ಹಿಂಬಾಕಿ ನೀಡಬೇಕು. ಮತ್ತು ೨೦೨೪ರ ಜನವರಿ ೧ ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕೆಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ನಡೆಸಿದರು.
ರಾಜ್ಯದ ಎಲ್ಲೆಡೆಯಿಂದ ಸಾರಿಗೆ ಸಂಸ್ಥೆಯ ನೌಕರರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು. ದೊಡ್ಡ ಸಂಖ್ಯೆಯಲ್ಲಿ ಸಾರಿಗೆ ನೌಕರರು ಸಮಾವೇಶಗೊಂಡು ತಮ್ಮ ಬೇಡಿಕೆಗಳ ಈಡೇರಿಕೆಗೆ ಹಕ್ಕೋತ್ತಾಯ ಮಂಡಿಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿನ್ನೆ ೨೬ ತಿಂಗಳ ಹಿಂಬಾಕಿ ಬಿಡುಗಡೆಗೆ ಹಾಗೂ ೨೦೨೫ ಏಪ್ರಿಲ್ ನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಒಪ್ಪಿ ಈ ಬಗ್ಗೆ ಆದೇಶವನ್ನು ಹೊರಡಿಸಿತ್ತು. ಆದರೆ ಸಾರಿಗೆ ಸಂಸ್ಥೆಯ ನೌಕರರು ರಾಜ್ಯ ಸರ್ಕಾರದ ಈ ತೀರ್ಮಾನವನ್ನು ತಿರಸ್ಕರಿಸಿ ೩೮ ತಿಂಗಳ ಹಿಂಬಾಕಿ ಬಿಡುಗಡೆ ಮತ್ತು ೨೦೨೪ರ ಜನವರಿಯಿಂದಲೇ ವೇತನ ಪರಿಷ್ಕರಣೆ ಆಗಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾಳೆಯಿಂದ ಸಾರಿಗೆ ನೌಕರರು ಸಂಪು ಹೂಡುವ ಸಾಧ್ಯತೆಯಿದ್ದು, ಒಂದು ವೇಳೆ ನಾಳೆಯಿಂದಲೇ ಮುಷ್ಕರಕ್ಕೆ ನಿರ್ಧರಿಸಿದರೆ ಬಿಎಂಟಿಸಿ ಸೇರಿದಂತೆ ರಾಜ್ಯದ ಎಲ್ಲೆಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಸಾರಿಗೆ ನೌಕರರ ಸಂಘಟನೆಗಳು ಈ ಹಿಂದೆ ಜನವರಿ ೨೯ ರಂದು ನಡೆಸಲು ಉದ್ದೇಶಿಸಿದ್ದ ಬೆಂಗಳೂರು ಚಲೋ ಹೋರಾಟವನ್ನು ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಹಲವಾರು ನೌಕರರು ಕೆಲಸಕ್ಕೆ ಗೈರಾಗಿ ಬೆಂಗಳೂರು ಚಲೋದಲ್ಲಿ ಭಾಗಿಯಾಗಿದ್ದರು.
ರಾಜ್ಯದೆಲ್ಲೆಡೆ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗಿಯಾಗದಂತೆ ಹಾಗೂ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.
ಎಂದಿನಂತೆ ಬಸ್ ಸಂಚಾರ:
ನಾಲ್ಕು ಸಾರಿಗೆ ನಿಗಮಗಳಿಂದ ಬೆಂಗಳೂರು ಚಲೋಗೆ ಕರೆ ಹಿನ್ನೆಲೆ ರಾಜ್ಯಾದ್ಯಂತ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ ಎನ್ನಲಾಗಿತ್ತು.
ಆದರೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ ಎಲ್ಲಿಯೂ ಅನಾನುಕೂಲಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ಬಸ್ ಸಂಚಾರದಲ್ಲಿ ವ್ಯತ್ಯಯ ಆಗದಂತೆ ಕ್ರಮಕೈಗೊಳ್ಳಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಆದೇಶ ಮಾಡಿದ್ದು, ತುರ್ತು ಮತ್ತು ಅನಿವಾರ್ಯ ಸಂದರ್ಭ ಹೊರತು ಯಾವುದೇ ರಜೆ ನೀಡಬೇಡಿ ಎಂದು ಸೂಚಿಸಿದ್ದಾರೆ.
ಮುಷ್ಕರ ಸಂಜೆ ನಿರ್ಧಾರ
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ನಡೆಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ರಾಜ್ಯ ಸರ್ಕಾರ ೨೬ ತಿಂಗಳ ಹಿಂಬಾಕಿ ಬಿಡುಗಡೆಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಮುಷ್ಕರ ನಡೆಸಬೇಕೆ ಇಲ್ಲವೇ ಮುಷ್ಕರವನ್ನು ಕೈಬಿಡಬೇಕೆ ಎಂಬ ಬಗ್ಗೆ ಸಂಜೆ ೪ ಗಂಟೆಗೆ ನಿರ್ಧಾರ ಪ್ರಕಟಿಸುವರು.
ರಾಜ್ಯ ಸರ್ಕಾರ ೩೮ ತಿಂಗಳ ಹಿಂಬಾಕಿ ಪೈಕಿ, ೨೬ ತಿಂಗಳ ಹಿಂಬಾಕಿ ಬಿಡುಗಡೆ ಸಮ್ಮತಿಸಿ, ೨೦೨೫ರ ಏಪ್ರಿಲ್ ನಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಹೇಳಿತ್ತು.
ಆದರೆ ಕೆಎಸ್‌ಆರ್‌ಟಿಸಿ ನೌಕರರು ೩೮ ತಿಂಗಳ ಹಿಂಬಾಕಿ ನೀಡಬೇಕು. ಹಾಗೂ ೨೦೨೪ರ ಜನವರಿಯಿಂದಲೇ ವೇತನ ಪರಿಷ್ಕರಣೆ ಆಗಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಇಂದು ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ ಸಭೆಯಲ್ಲಿ ಚರ್ಚಿಸಿ, ಮುಷ್ಕರದ ಬಗ್ಗೆ ತೀರ್ಮಾನ ಪ್ರಕಟಿಸುತ್ತೇವೆ ಎಂದು ಸಾರಿಗೆ ನೌಕರರ ಸಂಘದ ಅಧ್ಯಕ್ಷ ವಿಜಯಭಾಸ್ಕರ್ ತಿಳಿಸಿದರು.


























